ಬಿಜೆಪಿ ನಡೆಸುತ್ತಿರುವ ಆಪರೇಶನ್ ಕಮಲ ಪ್ರಜಾತಂತ್ರ ವ್ಯವಸ್ಥೆಗೆ ಗಂಡಾಂತರಕಾರಿ ಎಂದು ಕಿಡಿಕಾರಿದ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅವರು, ಹಣದಾಸೆಯಿಂದ ಕೆಲವರು ಕಾಂಗ್ರೆಸ್ ಬಿಟ್ಟು ಹೋದರೆ ಅದರಿಂದ ಪಕ್ಷ ಶುದ್ದೀಕರಣವಾಗುತ್ತದೆ ಎಂದು ಹೇಳಿದ್ದಾರೆ.
ಪಕ್ಷದ ವರಿಷ್ಠರನ್ನು ಭೇಟಿ ಮಾಡಲು ಇಲ್ಲಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಹಣದ ಆಮಿಷ ಒಡ್ಡಿ ನಡೆಸುತ್ತಿರುವ ಆಪರೇಷನ್ ಕಮಲ ಬಿಜೆಪಿಯ ಹೇಯ ಕೆಲಸಗಳಾಗಿದ್ದು, ಅದು ಆ ಪಕ್ಷಕ್ಕೆ ಶೋಭೆ ತರುವುದಿಲ್ಲ ಎಂದು ಹರಿಹಾಯ್ದರು.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರುಗಳಲ್ಲಿ ಭಿನ್ನಾಭಿಪ್ರಾಯಗಳಿವೆ ಎಂಬುದನ್ನು ಅಲ್ಲಗಳೆದ ಅವರು, ತಾವು ಎಲ್ಲ ಹಿರಿಯ ಮುಖಂಡರೊಂದಿಗೆ ಉತ್ತಮವಾಗಿ ಹೊಂದಿಕೊಂಡು ಹೋಗುತ್ತಿರುವುದಾಗಿ ತಿಳಿಸಿದರು. |