ಪ್ರೇಮಿಗಳ ದಿನಾಚರಣೆಯಂದು ಪ್ರೇಮಿಗಳಿಗೆ ಮದುವೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದ, ಶ್ರೀರಾಮಸೇನೆಯ ವರಿಷ್ಠ ಮುತಾಲಿಕ್ ಅವರನ್ನು ಮುಂಜಾಗ್ರತಾ ಕ್ರಮವಾಗಿ ಫೆ.13ರಂದು ಬಂಧಿತರಾಗಿದ್ದ ಅವರಿಗೆ ಮಂಗಳವಾರ ಗುಲ್ಬರ್ಗಾ ತಾಲೂಕು ದಂಡಾಧಿಕಾರಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಮುತಾಲಿಕ್ ಅವರೊಂದಿಗೆ ಬಂಧಿತರಾಗಿದ್ದ ಆಂದೋಲನ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ 14ಮಂದಿಯೂ ಈ ಸಂದರ್ಭದಲ್ಲಿ ಬಂಧಮುಕ್ತರಾಗಿದ್ದಾರೆ.
ಪ್ರೇಮಿಗಳ ದಿನಾಚರಣೆಯಂದು ತಾಳಿ ಕಟ್ಟಿ ಇಲ್ಲವೇ ರಾಖಿ ಕಟ್ಟಿ ಎಂಬ ವಿನೂತನ ಘೋಷಣೆಯೊಂದಿಗೆ ಅಭಿಯಾನ ನಡೆಸುವುದಾಗಿ ಶ್ರೀರಾಮಸೇನೆ ಹೇಳಿಕೆ ನೀಡುವ ಮೂಲಕ ದೇಶಾದ್ಯಂತ ತೀವ್ರ ಟೀಕೆಗೆ ಒಳಗಾಗಿತ್ತು, ಈ ಸಂಬಂಧ ರಾಜ್ಯಾದ್ಯಂತ ಬಿಗು ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿತ್ತು.
ರಾಜ್ಯ ಸರ್ಕಾರ ಕೂಡ ಈ ನಿಟ್ಟಿನಲ್ಲಿ ಭಾರಿ ಬಿಗಿ ಭದ್ರತೆಯನ್ನು ಕೈಗೊಂಡಿತ್ತು. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪ್ರಮೋದ್ ಮುತಾಲಿಕ್, ಆಂದೋಲನ ಸಿದ್ದಲಿಂಗ ಸ್ವಾಮೀಜಿಗಳು ಸೇರಿ ಗುಲ್ಬರ್ಗಾ ಗ್ರಾಮೀಣ ಪೊಲೀಸರು ಬಂಧಿಸಿದ್ದ 14 ಮಂದಿಯನ್ನು ಇಂದು ಗುಲ್ಬರ್ಗಾ ತಾಲ್ಲೂಕು ದಂಡಾಧಿಕಾರಿಗಳು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಬಿಡುಗಡೆ ನಂತರ ಪ್ರತಿಕ್ರಿಯಿಸಿರುವ ಮುತಾಲಿಕ್, ಯಾವ ಕಾರಣವೂ ಇಲ್ಲದೆ ಅಕ್ರಮವಾಗಿ ಬಂಧಿಸಿರುವ ರಾಜ್ಯ ಸರ್ಕಾರ ಕ್ರಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. |