ಮಂಡ್ಯ: ತಮ್ಮ ಮುಂದಿನ ರಾಜಕೀಯ ನಿರ್ಧಾರಗಳ ಕುರಿತು ಕೆಲ ದಿನಗಳಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಸಂಸದ ಅಂಬರೀಶ್ ತಿಳಿಸಿದ್ದು, ತಾವು ಸದ್ಯದ ಮಟ್ಟಿಗೆ ರಾಜಕೀಯದಲ್ಲಿ ತಟಸ್ಥವಾಗಿರುವುದಾಗಿ ನುಡಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕೆ ಬೇಡವೇ ಎಂಬ ಬಗ್ಗೆ ತೀರ್ಮಾನ ಮಾಡಿಲ್ಲ. ಕಾದು ನೋಡಿ ಈ ಬಗ್ಗೆ ಸದ್ಯದಲ್ಲಿಯೇ ತಿಳಿಯಲಿದೆ ಎಂದು ಅಂಬರೀಷ್ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದರು.
ಜನತೆ ಹಾಗೂ ರೈತರ ಮೇಲೆ ತಾವು ಇಟ್ಟಿರುವ ಅಭಿಮಾನಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ಸಂಸದರ ಅವಧಿಯಲ್ಲಿ ತಾವು ಅತ್ಯಂತ ಪ್ರಾಮಾಣಿಕವಾಗಿ ನಿಧಿ ಬಳಕೆಯಾಗುವಂತೆ ನೋಡಿ ಕೊಂಡಿದ್ದೇನೆ. ಸಾರ್ವಜನಿಕರ ಹಣ ಎಲ್ಲೂ ದುರ್ಬಳಕೆಯಾಗದ ರೀತಿ ನೋಡಿಕೊಂಡಿದ್ದೇನೆ ಎಂದರು.
ಸದ್ಯದ ಮಟ್ಟಿಗೆ ರಾಜಕೀಯದಿಂದ ದೂರ ಉಳಿದಿದ್ದೇನೆ. ಈ ಬಗ್ಗೆ ಕೆಲ ದಿನಗಳಲ್ಲೇ ಸ್ಪಷ್ಟ ನಿರ್ಧಾರ ಕೈಗೊಳ್ಳುವೆ ಎಂದ ಅಂಬಿ, ಹೊಗೇನಕಲ್ ವಿಚಾರ ಹಾಗೂ ರೈಲ್ವೆ ಬಜೆಟ್ ಹಾಗೂ ಆಯವ್ಯಯ ಸಂದರ್ಭದಲ್ಲಿ ರಾಜ್ಯಕ್ಕಾಗದ ಅನ್ಯಾಯದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು. |