ಆರ್ಥಿಕ ಹಿಂಜರಿತನದ ನಡುವೆಯೂ ಅಭಿವೃದ್ದಿ ಕಾಮಗಾರಿಗಳಿಗೆ ಹಣದ ಕೊರತೆಯಾಗದಂತೆ ಬಜೆಟ್ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋರಿಕೆ ತಡೆಗಟ್ಟಿ ಖಜಾನೆ ತುಂಬಿಸಿ ಅಭಿವೃದ್ದಿ ಕಾಮಗಾರಿಗಳು ಸುಗಮವಾಗಿ ನಡೆಯುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು. ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ಅಮೆರಿಕ ಸೇರಿದಂತೆ ಹಲವಾರು ರಾಷ್ಟ್ರಗಳು ಸಂಕಷ್ಟಕ್ಕೊಳಗಾಗಿವೆ.
ಭಾರತವೂ ಅದಕ್ಕೆ ಹೊರತಾಗಿಲ್ಲ. ಇತ್ತೀಚೆಗೆ ಕೇಂದ್ರ ಬಜೆಟ್‌ನಲ್ಲಿಯೂ ಆ ಕುರಿತ ಪ್ರಸ್ತಾಪ ಮಾಡಲಾಗಿದೆ. ಆದರೆ, ರಾಜ್ಯದಲ್ಲಿ ಹೆಚ್ಚಿನ ತೊಂದರೆಯಾಗದಂತೆ ಸಮರ್ಪಕ ನಿರ್ವಹಣೆ ಮಾಡಲಾಗುವುದು ಎಂದು ಹೇಳಿದರು.
ಅಭಿವೃದ್ದಿ ವಿಚಾರದಲ್ಲಿ ರಾಜ್ಯವನ್ನು ಮಾದರಿ ಮಾಡಬೇಕು ಎಂಬುದು ನನ್ನ ಕನಸು. ಬೆಂಗಳುರು ಸೇರಿದಂತೆ ರಾಜ್ಯ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಎಲ್ಲವನ್ನೂ ಮಾಡಿಬಿಟ್ಟಿದ್ದೇನೆ ಎಂದು ಕೊಚ್ಚಿಕೊಳ್ಳುತ್ತಿಲ್ಲ. ಆದರೆ, ನನ್ನ ಇತಿಮಿತಿಯಲ್ಲಿ ಸಾಧ್ಯವಾದಷ್ಟು ಮಾಡಿದ್ದೇನೆ. ಇನ್ನೂ ಮಾಡಬೇಕಾದ ಕೆಲಸಗಳ ಬಗ್ಗೆ ನಿಗಾ ವಹಿಸಿದ್ದೇನೆ. ಸಾರ್ವಜನಿಕರು ವಾಸ್ತವಾಂಶ ತಿಳಿದುಕೊಳ್ಳಬೇಕು ಎಂದು ಮನವಿ ಮಾಡಿದರು.
ಅಭಿವೃದ್ದಿ ವಿಷಯದಲ್ಲಿ ಎಂದಿಗೂ ರಾಜಕೀಯ ಮಾಡಲು ಹೋಗುವುದಿಲ್ಲ. ಎಲ್ಲ ಕ್ಷೇತ್ರಗಳಿಗೂ ಸಮಾನ ಆಧ್ಯತೆ ನೀಡಲಾಗುವುದು ಎಂದು ಹೇಳಿದರು. |