ರಾಜ್ಯದಲ್ಲಿ ಈಗಾಗಲೇ ಸಾಕಷ್ಟು ವಿವಾದ ಹುಟ್ಟು ಹಾಕಿರುವ ಮತಾಂತರವನ್ನು ನಿಷೇಧಿಸುವ ಕಾಯ್ದೆಯನ್ನು ಜಾರಿಗೊಳಿಸುವ ಅಗತ್ಯ ಇದೆ ಎಂದು ರಾಜ್ಯ ಕಾನೂನು ಮತ್ತು ಮಾನವ ಹಕ್ಕುಗಳ ಖಾತೆ ಸಚಿವ ಎಸ್.ಸುರೇಶ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಂಗಳೂರು, ಉಡುಪಿ ಸೇರಿದಂತೆ ರಾಜ್ಯದ ಹಲವೆಡೆ ಕ್ರೈಸ್ತ ಸಮುದಾಯ ಮತಾಂತರ ನಡೆಸುತ್ತಿದೆ ಎಂಬ ಆಪಾದನೆ ಬಲಪಂಥೀಯ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಸಾಕಷ್ಟು ಗೊಂದಲ ನಿರ್ಮಾಣವಾಗಿದೆ. ಆ ನಿಟ್ಟಿನಲ್ಲಿ ಮತಾಂತರ ನಿಷೇಧದ ಕುರಿತು ಚರ್ಚೆ ನಡೆಸಿ ಕಾನೂನನ್ನು ಜಾರಿಗೆ ತರಲಾಗುವುದು ಎಂದು ಸುರೇಶ್ ಕುಮಾರ್ ಸಂಘಪರಿವಾರದ ಮುಖವಾಣಿ ಆರ್ಗನೈಸರ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಈ ನಿಲುವು ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಮಂಗಳೂರಿನಲ್ಲಿ ಇತ್ತೀಚೆಗೆ ಶ್ರೀರಾಮಸೇನೆ ಪಬ್ ಮೇಲೆ ನಡೆಸಿದ ದಾಳಿಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡ ಸಚಿವರು, ಶ್ರೀರಾಮಸೇನೆ ಕಾನೂನುನನ್ನು ಕೈಗೆತ್ತಿಕೊಳ್ಳದೇ ಕಾರ್ಯನಿರ್ವಹಿಸಬೇಕಿತ್ತು ಎಂದು ಹೇಳಿದರು. ಆದರೆ ಸರ್ಕಾರ ಕೂಡ ಪಬ್ ಸಂಸ್ಕೃತಿಗೆ ಕಡಿವಾಣ ಹಾಕುವ ಕುರಿತು ಚಿಂತನೆ ನಡೆಸುತ್ತಿರುವುದಾಗಿ ಈ ಸಂದರ್ಭದಲ್ಲಿ ತಿಳಿಸಿದ್ದಾರೆ. |