ಮಂಗಳೂರು ಪಬ್ ದಾಳಿ ಪ್ರಕರಣದ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ರೇಣುಕಾ ಚೌಧುರಿ ವಿರುದ್ಧ ಕೂಡಲೇ ಎಫ್‌ಐಆರ್ ದಾಖಲಿಸುವಂತೆ ನಗರದ 3ನೇ ಜೆಎಂಎಫ್‌ಸಿ ನ್ಯಾಯಾಲಯ ಪೊಲೀಸರಿಗೆ ಸೂಚನೆ ನೀಡಿದೆ.ನಗರದ ಎಮ್ನೇಶಿಯಾ ಪಬ್ ಮೇಲೆ ಶ್ರೀರಾಮಸೇನೆ ದಾಳಿ ನಡೆಸಿದ ವರದಿ ಮಾಧ್ಯಮಗಳಲ್ಲಿ ಬಿತ್ತರಗೊಂಡ ನಂತರ ಸಚಿವೆ ರೇಣುಕಾ ಚೌಧುರಿ ಅವರು, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಮಂಗಳೂರು ತಾಲಿಬಾಲೀಕರಣಗೊಳ್ಳುತ್ತಿದೆ ಎಂದು ಹೇಳಿಕೆ ನೀಡಿದ್ದರು.ಚೌಧುರಿ ಅವರು ನೀಡಿರುವ ಈ ಹೇಳಿಕೆ ವಿರುದ್ಧ ಮಂಗಳೂರಿನ ಮೇಯರ್ ಸೇರಿದಂತೆ ಹಲವರು ಕೋರ್ಟ್‌ನಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು. ಇಂದು ವಿಚಾರಣೆ ನಡೆಸಿದ 3ನೇ ಜೆಎಂಎಫ್‌ಸಿ ನ್ಯಾಯಾಲಯ, ಸಚಿವೆ ವಿರುದ್ಧ ತಕ್ಷಣವೇ ಎಫ್‌ಐಆರ್ ದಾಖಲಿಸುವಂತೆ ಗ್ರಾಮಾಂತರ ಪೊಲೀಸರಿಗೆ ಆದೇಶ ನೀಡಿದ್ದು, ಮಾರ್ಚ್ 20ರೊಳಗೆ ವರದಿ ನೀಡುವಂತೆ ಸೂಚನೆ ನೀಡಿದೆ.ಚೌಧುರಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಮಂಗಳೂರು ನ್ಯಾಯಾಲಯದಲ್ಲಿ ದಾಖಲಾಗಿದ್ದ ಕುರಿತು ಸುದ್ದಿಗಾರರು ಚೌಧುರಿ ಅವರನ್ನು ಮಂಗಳವಾರ ಪ್ರಶ್ನಿಸಿದ ಸಂದರ್ಭದಲ್ಲಿ, ಇದು ರಾಜಕೀಯ ಪ್ರೇರಿತ ಕ್ರಮವಾಗಿದ್ದು, ಈ ಬಗ್ಗೆ ಇದುವರೆಗೂ ತನಗೆ ಯಾವುದೇ ನೋಟಿಸ್ ತಲುಪಿಲ್ಲ ಎಂದು ತಿಳಿಸಿದ್ದರು.ಅಲ್ಲದೇ ಮಂಗಳೂರಿನಲ್ಲಿ ಅಶಾಂತಿಯ ವಾತಾವರಣವಿದೆ ಎಂಬುದು ವಾಸ್ತವ. ಅಲ್ಲಿ ಶ್ರೀರಾಮ ಸೇನೆಯ ಪುಂಡಾಟಿಕೆಯೇ ನಡೆಯುತ್ತಿದೆ ಎಂಬುದು ಸ್ಪಷ್ಟ. ಹಾಗಿದ್ದ ಮೇಲೆ ನನಗೇಕೆ ಅವರು ನೋಟಿಸ್ ಕಳುಹಿಸಬೇಕು? ಈ ರೀತಿ ಮಾಡುವ ಬದಲಾಗಿ, ಗೂಂಡಾ ಶಕ್ತಿಗಳ ವಿರುದ್ಧ ಕರ್ನಾಟಕ ಸರಕಾರ ಕ್ರಮ ಕೈಗೊಳ್ಳುತ್ತಿಲ್ಲವೇಕೆ ಎಂದು ಅವರು ಪ್ರಶ್ನಿಸಿದ್ದರು. |