ಕೇಂದ್ರ ಸರ್ಕಾರ ವಿವಾದಾತ್ಮಕ ಹೊಗೇನಕಲ್ ಯೋಜನೆ ಕಾಮಗಾರಿ ಕೈಗೊಳ್ಳಲು ತಮಿಳುನಾಡಿಗೆ ಗ್ರೀನ್ ಸಿಗ್ನಲ್ ತೋರಿಸಿರುವುದನ್ನು ಖಂಡಿಸಿ ಕನ್ನಡ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಯೋಜನೆ ಕೈಗೊಳ್ಳಬಾರದೆಂದು ರಾಜ್ಯ ಸರ್ಕಾರ ಹಾಗೂ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದರೂ ಸಹ ಕೇಂದ್ರ ಕನ್ನಡಿಗರಿಗೆ ಕವಡೆ ಕಾಸಿನ ಮರ್ಯಾದೆ ನೀಡಿಲ್ಲ, ತನ್ನ ಮಧ್ಯಂತರ ಬಜೆಟ್‌ನಲ್ಲಿ ಹೊಗೇನಕಲ್ ಯೋಜನೆಗೆ ತಮಿಳುನಾಡು ಜಾಪನ್ ಸರ್ಕಾರದಿಂದ ಸಾಲ ಪಡೆಯಲು ಒಪ್ಪಿಗೆ ನೀಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.ಈ ಪ್ರದೇಶದಲ್ಲಿ ಜಂಟಿ ಸಮೀಕ್ಷೆ ನಡೆಸಿ ಎರಡೂ ರಾಜ್ಯಗಳಿಗೆ ನ್ಯಾಯ ದೊರಕಿಸಿಕೊಡಬೇಕಾದ ಕೇಂದ್ರ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ರಾಜ್ಯಕ್ಕೆ ಅನ್ಯಾಯಗಳ ಸರಮಾಲೆ ಮುಂದುವರಿಸಿರುವುದನ್ನು ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಖಂಡಿಸಿದ್ದಾರೆ.ಕೂಡಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಯಾವುದೇ ಕಾರಣಕ್ಕೂ ಹೊಗೇನಕಲ್ ಯೋಜನೆ ಕೈಗೆತ್ತಿಕೊಳ್ಳಬಾರದೆಂದು ತಮಿಳುನಾಡು ಸರ್ಕಾರಕ್ಕೆ ತಾಕೀತು ಮಾಡಬೇಕು ಎಂದು ಕುಮಾರ್ ಆಗ್ರಹಿಸಿದ್ದಾರೆ. |