ವೈಕುಂಠ ಏಕಾದಶಿಯಂದು ಭಕ್ತರಿಗೆ ಲಾಡು ನೀಡಿದ್ದ ಮುಜರಾಯಿ ಇಲಾಖೆಗೆ ಅತ್ಯಂತ ಸೂಕ್ತ ಅನ್ನಿಸಿಕೊಂಡಿರುವ ಸಚಿವ ಕೃಷ್ಣಯ್ಯ ಶೆಟ್ಟಿ, ಇದೀಗ 'ಭಗೀರಥ'ನಾಗಲು ಹೊರಟಿದ್ದು, ಶಿವರಾತ್ರಿಯಂದು ಮೃತ್ಯುಂಜಯನಿಗೆ ಅಕ್ಷರಶಃ ಗಂಗಾಜಲ ಅಭಿಷೇಕ ಮಾಡುವ ಅವಕಾಶ ಒದಗಿಸುತ್ತಿದ್ದಾರೆ.
ಹಿಮಾಲಯ ತಪ್ಪಲಿನಿಂದ 50,000 ಲೀಟರ್ ಗಂಗಾಜಲ ಹೊತ್ತ ಟ್ಯಾಂಕರುಗಳು ರಾಜ್ಯಕ್ಕೆ ಪ್ರಯಾಣ ಬೆಳೆಸಿವೆ. ಶನಿವಾರ ನಗರ ತಲುಪಿ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ತಾಲ್ಲೂಕುಗಳಿಗೆ ರವಾನೆಯಾಗಲಿದೆ.
ಇಲಾಖೆ ವ್ಯಾಪ್ತಿಯಲ್ಲಿರುವ ಎಲ್ಲ ದೇವಾಲಯಗಳಲ್ಲೂ ಈ ವ್ಯವಸ್ಥೆ ಇಲ್ಲ. ಪ್ರತಿ ತಾಲ್ಲೂಕಿನಲ್ಲಿ ಆಯ್ಕೆ ಮಾಡಿದ ನಾಲ್ಕು ಶಿವ ದೇಗುಲಗಳಲ್ಲಿ ಮಾತ್ರ ಗಂಗಾಜಲದ ಅಭಿಷೇಕ. ಜೊತೆಗೆ ಭಕ್ತರಿಗೆ ದೇಶದ ಪ್ರಸಿದ್ಧ ಶಿವಲಿಂಗಗಳ ಚಿತ್ರವಿರುವ ಕ್ಯಾಲೆಂಡರ್ ಉಚಿತ. ಇದಕ್ಕಾಗಿ ಇಲಾಖೆ ಬೊಕ್ಕಸದಿಂದ ನಯಾಪೈಸೆಯೂ ವೆಚ್ಚವಾಗುವುದಿಲ್ಲವಂತೆ!
ನಮ್ಮ ಇಲಾಖೆ ನಡೆಯುತ್ತಿರುವುದು ದಾನಿಗಳಿಂದ. ಈಗಲೂ ಅಷ್ಟೇ ಎಲ್ಲಾ ಕಾರ್ಯಕ್ರಮಗಳಿಗೂ ದಾನಿಗಳೇ ನೆರವು ನೀಡಿದ್ದಾರೆ. ಇಲಾಖೆ ಮಾನವ ಸಂಪನ್ಮೂಲ ಮಾತ್ರ ಒದಗಿಸುತ್ತದೆ ಎಂದು ಮುಜರಾಯಿ ಸಚಿವ ಕೃಷ್ಣಯ್ಯ ಶೆಟ್ಟಿ ತಿಳಿಸಿದ್ದಾರೆ.
ಗಂಗಾಜಲಕ್ಕೆ 2.5 ಲಕ್ಷ ರೂ. ಖರ್ಚಾಗುತ್ತದೆ. ಅಷ್ಟನ್ನು ನಾನೇ ಭರಿಸುತ್ತೇನೆ ಎಂದು ಅವರು ಹೇಳಿದರು. ಶಿವನಿಗೆ ಗಂಗಾಜಲ ಅಭಿಷೇಕ ಮಾಡಬೇಕೆಂಬ ಆಸೆ ಹಿಂದೂಗಳಿಗೆ ಇರುತ್ತದೆ. ಇದರಿಂದ ಈ ಕಲ್ಪನೆ ಬಂತು ಎಂದು ಅವರು ಹೇಳಿದರು.
ಹೇಗಿದೆ ಆಧುನಿಕ ಭಗೀರಥನ ಪ್ರಯತ್ನ? |