ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ವರ್ಗದವರ ಮತ ಸೆಳೆಯಲು ಜೆಡಿಎಸ್ ಭಾವನಾತ್ಮಕ ತಂತ್ರ ಹೆಣೆದಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.
ಜೆಡಿಎಸ್ ಈ ಬಾರಿ ರಾಜ್ಯದ ನೆಲ ಜಲ ಮತ್ತು ಜಾತಿ ವಿಷಯವನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗಲು ನಿರ್ಧರಿಸಿದಂತೆ ಕಾಣುತ್ತಿದೆ. ಹಿಂದಿನ ಚುನಾವಣೆಯಲ್ಲಿ ರಾಜ್ಯದ ಹಿತಕ್ಕಾಗಿ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ ಎಂಬ ಸಂದೇಶ ಸಾರಿದ್ದ ಜೆಡಿಎಸ್ ಈ ಸಲ ಇನ್ನಷ್ಟು ಜನಾಕರ್ಷಕ ಅಂಶಗಳನ್ನೂ ಸೇರಿಸಿಕೊಂಡಿದೆ.
ತಮಿಳುನಾಡು -ಕರ್ನಾಟಕ ನಡುವಿನ ಹೊಗೇನಕಲ್ ಜಲ ವಿವಾದ, ಮಹಾರಾಷ್ಟ್ರ ಕರ್ನಾಟಕ ರಾಜ್ಯಗಳ ಬೆಳಗಾವಿ ಗಡಿ ವಿವಾದ, ಶಾಸ್ತ್ರೀಯ ಸ್ಥಾನಮಾನದಂತಹ ವಿಚಾರಗಳನ್ನು ಜನರ ಮುಂದಿಡಲು ಸಿದ್ಧತೆ ನಡೆಸಿದೆ.
ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸುವಂತೆ ಶಿವಸೇನೆ ಆಗ್ರಹಿಸಿದ್ದರೂ ರಾಜ್ಯ ಬಿಜೆಪಿ ಮೌನವಾಗಿರುವುದು, ಎನ್‌ಡಿಎ ಆಡಳಿತ ಅವಧಿಯಲ್ಲಿ ನನೆಗುದಿಗೆ ಬಿದ್ದ ರಾಜ್ಯದ ಯೋಜನೆಗಳು ಹಾಗೂ ವೀರಶೈವ ಸಮುದಾಯದ 19 ಉಪ ಜಾತಿಗಳನ್ನು 3ಬಿ ಪ್ರವರ್ಗಕ್ಕೆ ಸೇರಿಸಿರುವ ರಾಜ್ಯ ಸರ್ಕಾರದ ನಿರ್ಧಾರಗಳು ಜೆಡಿಎಸ್‌ನ ಪ್ರಮುಖ ಅಸ್ತ್ರಗಳಾಗಲಿವೆ.
ಒಟ್ಟಾರೆಯಾಗಿ ರಾಜ್ಯದ ಪ್ರಾದೇಶಿಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆಗೆ ಜೆಡಿಎಸ್ ಮುಂದಾಗಿದೆ. ಬಿಎಸ್ಪಿ ಮತ್ತು ಎಸ್ಪಿ ಸೇರಿದಂತೆ ಯಾವುದೇ ಪಕ್ಷಗಳ ಜತೆ ಮೈತ್ರಿಗೆ ಅದಿ ಆಸಕ್ತಿ ತೋರಿಲ್ಲ. |