ಜಾಗತಿಕ ಮಟ್ಟದ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರನ್ನು ಮುಂಚೂಣಿಗೆ ತರಲು ರಾಜ್ಯ ಸರ್ಕಾರ ಅಗತ್ಯ ನೆರವು ನೀಡಲಿದ್ದು, 2009-10ನೇ ಸಾಲಿನ ಬಜೆಟ್ನಲ್ಲಿ 5 ಕೋಟಿ ರೂ. ಒದಗಿಸಲಾಗುವುದಲ್ಲದೆ ಮೈಸೂರು, ಮಂಗಳೂರು, ಬೀದರ್ ಹಾಗೂ ಧಾರವಾಡಗಳಲ್ಲಿ ಬಯೋಟೆಕ್ ಪಾರ್ಕ್ಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಇಂದಿನ ಐಟಿ, ಬಿಟಿ ಯುಗದಲ್ಲಿ ಈ ಕ್ಷೇತ್ರಕ್ಕೆ ಆದ್ಯತೆ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಆದ್ದರಿಂದ ಬಜೆಟ್‌ನಲ್ಲಿ ಘೋಷಿಸಿದಂತೆ ಅಗತ್ಯ ಹಣ ನೀಡಲಾಗಿದೆ. ಐಬಿಎಬಿ ಹಾಗೂ ಸಿಎಚ್ಜಿಗೆ ಸುಸಜ್ಜಿತವಾದ ಕಟ್ಟಡ ನಿರ್ಮಿಸುವ ಮೂಲಕ ಐಟಿ ಕ್ಷೇತ್ರದ ಪ್ರಮುಖ ಬೇಡಿಕೆಯನ್ನು ಈಡೇರಿಸಿದಂತಾಗಿದೆ ಎಂದರು.
ಮೈಸೂರಿನಲ್ಲಿ ನ್ಯೂಟ್ರಾ ಬಯೋಟೆಕ್ ಪಾರ್ಕ್ ಮತ್ತು ಸಸ್ಯಕ್ಕೆ ಸಂಬಂಧಿಸಿದಂತೆ ಫೈಟೋ ಫಾರ್ಮಸ್ಯೂಟಿಕಲ್ ಪಾರ್ಕ್, ಮಂಗಳೂರಿನಲ್ಲಿ ಮರೈನ್ ಬಯೋಟೆಕ್ ಪಾರ್ಕ್, ಬೀದರ್‌ನಲ್ಲಿ ಪ್ರಾಣಿಗಳ ಮನೆ ಹಾಗೂ ಧಾರವಾಡದಲ್ಲಿ ಅಗ್ರಿ ಬಯೋಟೆಕ್ ಪಾರ್ಕ್ಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.
ಕರ್ನಾಟಕ ಸರ್ಕಾರ ದೇಶದಲ್ಲಿಯೇ ಮೊದಲ ಬಾರಿಗೆ ಜೈವಿಕ ತಂತ್ರಜ್ಞಾನ ನೀತಿಯನ್ನು ಜಾರಿಗೆ ತಂದಿದೆ. ಆದರೆ ಈ ನೀತಿಯನ್ನು ಪರಿಷ್ಕರಿಸುವ ಅಗತ್ಯವಿದ್ದು, ಸದ್ಯದಲ್ಲಿಯೇ ಪರಿಷ್ಕೃತ ನೀತಿಯನ್ನು ಪ್ರಕಟಿಸಲಾಗುವುದು ಎಂದರು. |