ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಅದಕ್ಷ ಗೃಹಸಚಿವರಾಗಿರುವ ವಿ.ಎಸ್.ಆಚಾರ್ಯ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಗುರುವಾರ ಆರಂಭಗೊಂಡ ವಿಧಾಮಂಡಲದ ಅಧಿವೇಶನದಲ್ಲಿ ಪ್ರತಿಪಕ್ಷಗಳು ಆಗ್ರಹಿಸಿದವು.
ಎಲ್ಲೆಂದರಲ್ಲಿ ಕೊಲೆ ಪ್ರಕರಣ, ರೈತರ ಮೇಲೆ ದಬ್ಬಾಳಿಕೆ, ಪಬ್ ಮೇಲೆ ದಾಳಿ ಹೀಗೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯೇ ಹದಗೆಟ್ಟಿದೆ ಎಂದು ಆರೋಪಿಸಿದ ಪ್ರತಿಪಕ್ಷಗಳು, ಇದನ್ನು ಸಮರ್ಥವಾಗಿ ನಿಭಾಯಿಸಲು ಅಸಮರ್ಥರಾದ ಗೃಹಸಚಿವರು ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದವು.
ಏತನ್ಮಧ್ಯೆ ಪ್ರಥಮ ದಿನ ಅಧಿವೇಶನದಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಗೈರು ಹಾಜರಾಗಿದ್ದು ಕೂಡ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗುವಂತಾಯಿತು. ಅಲ್ಲದೇ ಕಾನೂನು ಸುವ್ಯವಸ್ಥೆ ಕುರಿತು ಗಂಭೀರ ಚರ್ಚೆ ನಡೆಸಲು ಅವಕಾಶ ಮಾಡಿಕೊಡುವಂತೆ ಉಭಯ ಸದನಗಳಲ್ಲಿ ಪ್ರತಿಪಕ್ಷಗಳು ಬಿಗಿಪಟ್ಟು ಹಿಡಿದವು.
ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಮಧ್ನಾಹ್ನ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿ 4ತಿಂಗಳ ಅವಧಿಗೆ ಲೇಕಾನುದಾನ ಕೇಳಲಿದ್ದಾರೆ.
ಗಡಿನಾಡು ಬೆಳಗಾವಿಯಲ್ಲಿ ಇತ್ತೀಚೆಗಷ್ಟೇ ಹತ್ತು ದಿನಗಳ ಕಾಲ ವಿಧಾನಮಂಡಲದ ಅಧಿವೇಶನ ಗಣಿಕಲಹದೊಂದಿಗೆ ಆರಂಭಗೊಂಡು, ಗಣಿ ಕಲಹದಲ್ಲೇ ಮುಕ್ತಾಯಗೊಂಡಿತ್ತು.
|