ರಾಜ್ಯ ಹೈಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೂರಾರು ಸಿಬ್ಬಂದಿಗಳನ್ನು ಧಾರವಾಡ ಮತ್ತು ಗುಲ್ಬರ್ಗಾ ಸಂಚಾರಿ ಪೀಠಕ್ಕೆ ಹಠಾತ್ತಾಗಿ ವರ್ಗಾವಣೆ ಮಾಡಿದ್ದನ್ನು ಖಂಡಿಸಿ ಗುರುವಾರ ಹೈಕೋರ್ಟ್ ಸಿಬ್ಬಂದಿ ನ್ಯಾಯಾಲಯ ಕಲಾಪಗಳಿಗೆ ಗೈರು ಹಾಜರಾಗಿ ಪ್ರತಿಭಟನೆ ನಡೆಸಿದರು.
ಸಿಬ್ಬಂದಿಗಳಿಗೆ ಯಾವುದೇ ಮುನ್ಸೂಚನೆ ನೀಡದೆ ಧಾರವಾಡ ಪೀಠಕ್ಕೆ 90ಜನರನ್ನು ಹಾಗೂ ಗುಲ್ಬರ್ಗಾ ಪೀಠಕ್ಕೆ 84 ಜನರನ್ನು ಶಾಶ್ವತವಾಗಿ ವರ್ಗಾವಣೆ ಮಾಡಲಾಗಿದೆ. ಹೈಕೋರ್ಟ್ ರಿಜಿಸ್ಟ್ರಾರ್ ಅವರ ಈ ಕ್ರಮವನ್ನು ಖಂಡಿಸಿ ಇಂದು ಮುಖ್ಯನ್ಯಾಯಾಧೀಶರ ಕೊಠಡಿಯ ಮುಂಭಾಗದ ಸಭಾಂಗಣದಲ್ಲಿ ನೂರಾರು ಸಿಬ್ಬಂದಿ ಪ್ರತಿಭಟನೆ ನಡೆಸಿದರು.
ಈ ಹಿಂದೆ ಪ್ರತಿ 6ತಿಂಗಳಿಗೊಮ್ಮೆ ಸರದಿಯಲ್ಲಿ ವರ್ಗಾವಣೆ ಮಾಡಲಾಗುತ್ತಿತ್ತು. ಆದರೆ ಈಗ ಈ ರೀತಿ ಯಾವುದೇ ನಿಯಮವನ್ನು ಪಾಲಿಸದೆ ಶಾಶ್ವತವಾಗಿ ವರ್ಗಾವಣೆ ಮಾಡಿದ್ದು, ಫೆ.24ರ ಒಳಗಾಗಿ ಆಯಾ ಸಂಚಾರಿ ಪೀಠಗಳಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶಿಸಲಾಗಿದೆ.
ಪ್ರತಿಭಟನೆಯಲ್ಲಿ ನ್ಯಾಯಾಂಗ ಅಧಿಕಾರಿಗಳು, ಬೆರಳಚ್ಚುಗಾರರು ಸೇರಿದಂತೆ ವಿವಿಧ ಹುದ್ದೆಯ ಸಿಬ್ಬಂದಿ ಭಾಗವಹಿಸಿದ್ದು, ನ್ಯಾಯಾಂಗದ ಕಾರ್ಯಕಲಾಪಗಳಿಗೆ ತೊಂದರೆ ಉಂಟಾಯಿತು. |