ಸರ್ಕಾರಿ ಆಸ್ಪತ್ರೆಗಳಿಗೆ ಗುಣಮಟ್ಟದ ಔಷಧಿ ಪೂರೈಸದ ಕಂಪೆನಿಗಳನ್ನು ಕಪ್ಪುಪಟ್ಟಿಗೆ ಸೇರಿಸಿ ಮೂರು ವರ್ಷಗಳ ಕಾಲ ಔಷಧಿ ಪೂರೈಸದಂತೆ ನಿರ್ಬಂಧ ಹಾಕಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.
ಆರೋಗ್ಯ ಸಚಿವ ಶ್ರೀರಾಮುಲು ಪರವಾಗಿ ಮಾತನಾಡಿದ ಪ್ರಾಥಮಿಕ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಎಚ್ಚರಿಕೆ ನೀಡಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಇಲ್ಲ. ಒಂದು ವೇಳೆ ಔಷಧಿ ಪೂರೈಕೆಯಲ್ಲಿ ವ್ಯತ್ಯಯ ಅಥವಾ ಕೊರತೆ ಕಂಡು ಬಂದರೆ ಬಳಕೆದಾರರ ನಿಧಿಯಿಂದಲೇ ಔಷಧಿ ಖರೀದಿಸುವ ಅಧಿಕಾರ ನೀಡಲಾಗಿದೆ.
ಆದರೆ, ರೋಗಿಗಳಿಗೆ ಹೊರಗಡೆಯಿಂದ ಔಷಧಿ ಖರೀದಿಸಿ ತರುವಂತೆ ಚೀಟಿ ನೀಡುವ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ನಾಯಿ ಕಡಿತಕ್ಕೆ ನೀಡುವ ಔಷಧಿ ರಾಜ್ಯದಲ್ಲಿ 93 ಸಾವಿರ ಸಂಖ್ಯೆಯಷ್ಟು ದಾಸ್ತಾನು ಇದೆ ಎಂದರು.
ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 5021 ಅರೆ ವೈದ್ಯಕೀಯ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಪ್ರಕ್ರಿಯೆ ಇದೇ 23 ರಿಂದ ಆರಂಭವಾಗಲಿದೆ.ಮುಂದಿನ ಮೂರು ತಿಂಗಳ ಒಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಈ ನೇಮಕಾತಿ ಬಳಿಕ ಖಾಲಿ ಇರುವ ಹುದ್ದೆಗಳನ್ನು ಆದ್ಯತೆ ಮೇರೆಗೆ ಭರ್ತಿ ಮಾಡಲಾಗುವುದು ಎಂದು ತಿಳಿಸಿದರು.
ತಜ್ಞ ವೈದ್ಯರ ಕೊರತೆ ನಿವಾರಿಸಲು ನಿವೃತ್ತರಾದ ತಜ್ಞ ವೈದ್ಯರನ್ನು ಮಾಸಿಕ 50 ಸಾವಿರ ರೂ.ಗಳ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. 815 ವೈದ್ಯರ ನೇಮಕ ಪ್ರಕ್ರಿಯೆ ನಡೆದಿದೆ ಎಂದರು. |