ದೇವಾಲಯಗಳಲ್ಲಿ ಲಾಡು ವಿತರಿಸುವುದು, ಗಂಗಾಜಲ ವಿತರಿಸುವುದು ಬಿಟ್ಟು ಮೊದಲು ಸರ್ಕಾರಿ ಆಸ್ಪತ್ರೆಗಳಲ್ಲಿ ಕುಡಿಯುವ ನೀರು ಕೊಡಿ ಎಂದು ಕಾಂಗ್ರೆಸ್ನ ಆರ್.ರೋಷನ್ಬೇಗ್ ಒತ್ತಾಯಿಸಿದ್ದಾರೆ.
ವಿಧಾನಸಭೆಯಲ್ಲಿ ಗುರುವಾರ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಬೇಗ್, ಬೆಂಗಳೂರು ನಗರ ಸೇರಿದಂತೆ ರಾಜ್ಯದ ಇತರ ಅನೇಕ ಆಸ್ಪತ್ರೆಗಳಲ್ಲಿ ನೀರಿನ ಸಮಸ್ಯೆ ಇದೆ ಎನ್ನುವುದನ್ನು ಸರ್ಕಾರದ ಗಮನಕ್ಕೆ ತಂದರು.
ಬೇಗ್ ಅವರ ಈ ಪ್ರಶ್ನೆಗೆ ಆರೋಗ್ಯ ಸಚಿವರ ಪರ ಉತ್ತರ ನೀಡಿದ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗೆಡೆ ಕಾಗೇರಿ ಅವರು ರಾಜ್ಯದ ಯಾವ ಆಸ್ಪತ್ರೆಯಲ್ಲೂ ನೀರಿನ ಸಮಸ್ಯೆ ಇಲ್ಲ ಎಂದರು. ಈ ಹೇಳಿಕೆಯಿಂದ ಆಕ್ರೋಶಿತರಾದ ಬೇಗ್, ನಿಮಗೆ ಗಂಗಾಜಲ, ಲಡ್ಡು-ಲಾಡು ಕೊಡುವುದು ಗೊತ್ತು. ಆಸ್ಪತ್ರೆಗಳಲ್ಲಿ ನೀರು ಇದೆಯೋ ಇಲ್ಲವೊ ಅನ್ನುವುದು ಹೇಗೆ ಗೊತ್ತಾಗುತ್ತದೆ?ಎಂದು ಆಕ್ಷೇಪಿಸಿದರು.
ಇದಕ್ಕೆ ಧಾರ್ಮಿಕ ದತ್ತಿ ಸಚಿವ ಎಸ್.ಎನ್.ಕೃಷ್ಣಯ್ಯ ಶೆಟ್ಟಿ, ಸಣ್ಣ ನೀರಾವರಿ ಸಚಿವ ಗೋವಿಂದ ಕಾರಜೋಳ ಸೇರಿದಂತೆ ಇತರರು ಆಕ್ಷೇಪ ವ್ಯಕ್ತಪಡಿಸಿ, ಪ್ರಶ್ನೆ ಸರಿಯಾಗಿ ಕೇಳುವಂತೆ ಬೇಗ್ ಅವರಿಗೆ ಆಗ್ರಹಪಡಿಸಿದಾಗ, ಕೆಲಹೊತ್ತು ಮಾತಿನ ವಾಗ್ದಾಳಿ ನಡೆಯಿತು. |