ಲೋಕಾಯುಕ್ತರ ವರದಿಯನ್ನು ಆಧರಿಸಿ ಅಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆಯನ್ನು ತಡೆಯಲು ಕ್ರಮಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ವಿ.ಎಸ್.ಆಚಾರ್ಯ ಅವರು ವಿಧಾನಪರಿಷತ್‌ನಲ್ಲಿ ಗುರುವಾರ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಯುನ ಡಾ.ಎಂ.ಪಿ.ನಾಡಗೌಡ ಪ್ರಶ್ನೆಗೆ ಮುಖ್ಯಮಂತ್ರಿಗಳ ಪರವಾಗಿ ಅವರು ಉತ್ತರಿಸಿ ಮಾತನಾಡಿದರು. ಲೋಕಾಯುಕ್ತರು ಮೂರು ತಿಂಗಳ ಕಾಲಾವಕಾಶ ನೀಡಿದ್ದಾರೆ. ವರದಿಯನ್ನು ಅಧ್ಯಯನ ಮಾಡಿ ವರದಿ ನೀಡಲು ಸರ್ಕಾರ ಈಗಾಗಲೇ ಉನ್ನತಮಟ್ಟದ ಸಮಿತಿ ರಚಿಸಿದೆ. ವರದಿ ಬಂದ ನಂತರ ಕ್ರಮ ಕೈಗೊಳ್ಳುತ್ತೇವೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಆಚಾರ್ಯ ಅವರ ಉತ್ತರದಿಂದ ಸಮಾಧಾನಗೊಳ್ಳದ ಡಾ. ಎಂ.ಪಿ.ನಾಡಗೌಡ ಅವರು, ಲೋಕಾಯುಕ್ತರು ತಮ್ಮ ವರದಿಯಲ್ಲಿ ಕಳ್ಳರು ಯಾರು ಎಂದು ಹೇಳಿದ್ದಾರೆ. ಹೆಲಿಕಾಪ್ಟರ‌್‌ನಲ್ಲಿ ಓಡಾಡುತ್ತಿದ್ದಾರೆ. ಪೊಲೀಸರು ಅವರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಈ ಹಗರಣದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನವರು ಕೂಡಾ ಇದ್ದಾರೆ ಎಂದು ಅವರು ಗಂಭೀರವಾಗಿ ಆರೋಪಿಸಿದರು.
ಜೆಡಿಎಸ್‌ನ ಎಂ.ಸಿ.ನಾಣಯ್ಯ ಮಾತನಾಡಿ, ಲೋಕಾಯುಕ್ತರು ಸಂಪೂರ್ಣವಾಗಿ ಗಣಿಗಾರಿಕೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ, ನಿಮಗೆ ನಿಜವಾಗಿಯೂ ಕಾಳಜಿ ಇದ್ದರೆ ವರದಿಯನ್ನು ಅನುಷ್ಠಾನಗೊಳಿಸಿ, ಸುಮ್ಮನೆ ಕಾಲಹರಣ ಮಾಡುತ್ತಾ ಲೋಕಾಯುಕ್ತರ ಮನಸ್ಸಿಗೆ ನೋವನ್ನು ಉಂಟುಮಾಡಬೇಡಿ ಎಂದು ಹೇಳಿದರು.
ವರದಿ ಸಲ್ಲಿಕೆಯಾದ 24 ಗಂಟೆಗಳಲ್ಲಿ ಕ್ರಮವನ್ನು ಕೈಗೊಳ್ಳಬೇಕಿತ್ತು. ವಿಳಂಬ ಮಾಡುತ್ತಿರುವುದನ್ನು ನೋಡಿದರೆ ಯಾರನ್ನೊ ರಕ್ಷಿಸುವ ಉದ್ದೇಶವಿರುವುದು ಸ್ಪಷ್ಟವಾಗುತ್ತದೆ ಎಂದು ವಿ.ಎಸ್.ಉಗ್ರಪ್ಪ ಹೇಳಿದರು. |