ಆಡಳಿತಾರೂಢ ಪಕ್ಷದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಶುಕ್ರವಾರ ಮಂಡಿಸಿದ್ದ 2009-10ರ ಸಾಲಿನ ಮುಂಗಡ ಪತ್ರದಲ್ಲಿ ಎಲ್ಲ ವರ್ಗಗಳನ್ನು ಓಲೈಸಿದ್ದು, ಕೃಷಿ, ಶಿಕ್ಷಣ, ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಆದರೆ ವಿಪಕ್ಷಗಳು ಇದೊಂದು ನಿರಾಶದಾಯಕ ಬಜೆಟ್ ಎಂದು ಕಟುವಾಗಿ ಟೀಕಿಸಿವೆ. ಕಣ್ಣೊರೆಸುವ ಬಜೆಟ್-ಮಲ್ಲಿಕಾರ್ಜುನ ಖರ್ಗೆ: ಮುಖ್ಯಮಂತ್ರಿಗಳು ಮಂಡಿಸಿದ್ದ ಬಜೆಟ್‌ನಲ್ಲಿ ಕೋಟಿಗಟ್ಟಲೆ ಹಣ ಘೋಷಿಸಿದ್ದಾರೆ. ಆದರೆ ಅದರ ಅನುಷ್ಠಾನಕ್ಕೆ ಹಣ ಎಲ್ಲಿಂದ ತರುತ್ತಾರೆ ಎಂಬ ಬಗ್ಗೆ ಪ್ರಸ್ತಾಪ ಇಲ್ಲ ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ. ಮಠ-ಮಂದಿರಗಳಿಗೆ ಹಣವನ್ನು ನೀಡುವ ಮೂಲಕ ಜನರ ಭಾವನೆಗಳನ್ನು ಭಾವನಾತ್ಮಕವಾಗಿ ಸೆಳೆಯುವ ಕೆಲವನ್ನು ಬಜೆಟ್‌ನಲ್ಲಿ ಮಾಡಲಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು. ಆರ್ಥಿಕ ಹಿಂಜರಿತದಿಂದ ಹಣದ ಕೊರತೆ ಇದ್ದರೂ ಕೂಡ ಘೋಷಣೆ ಮಾಡುವ ಮೂಲಕ ಜನರ ಕಣ್ಣೊರೆಸುವ ತಂತ್ರ ಅನುಸರಿಸಿದ್ದಾರೆ ಎಂದರು. ದಿಕ್ಕುತಪ್ಪಿಸುವ ಬಜೆಟ್-ಎಚ್.ಡಿ.ಕುಮಾರಸ್ವಾಮಿ: ಒಟ್ಟಾರೆಯಾಗಿ ಇಂದು ಮಂಡಿಸಿದ ಬಜೆಟ್ ಜನರನ್ನು ಮತ್ತೊಮ್ಮೆ ದಿಕ್ಕುತಪ್ಪಿಸುವ ಬಜೆಟ್ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಹೊಸ ಕಾಮಗಾರಿಯ ಪ್ರಸ್ತಾಪ ಇಲ್ಲ, ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜನರನ್ನು ಆಕರ್ಷಿಸುವ ಬಜೆಟ್ ಇದಾಗಿದೆ. ಅವರೇ ಪ್ರಣಾಳಿಕೆಯಲ್ಲಿ ಈ ಹಿಂದೆ ಘೋಷಿಸಿದ 2ರೂ.ಗೆ ಅಕ್ಕಿ ನೀಡುವುದಾಗಲಿ, ನಿರುದ್ಯೋಗ ಯುವಕರಿಗೆ ಭತ್ಯೆ ನೀಡುವುದಾಗಲಿ, ರೈತರಿಗೆ ಉಚಿತ ವಿದ್ಯುತ್ ನೀಡುವ ಪ್ರಸ್ತಾಪಗಳೇ ಇಲ್ಲ ಎಂದು ಕಟುವಾಗಿ ಟೀಕಿಸಿದರು.ಕನ್ನಡಕ್ಕೆ ಬಂಪರ್ ಕೊಡುಗೆ-ಮು.ಮ.ಚಂದ್ರು: ಪ್ರಥಮ ಬಾರಿಗೆ ಬಿಜೆಪಿ ಸರ್ಕಾರ ಬಜೆಟ್ ಪ್ರತಿಯನ್ನು ಕನ್ನಡದಲ್ಲಿ ಮುದ್ರಿಸುವ ಮೂಲಕ ಕನ್ನಡತನವನ್ನು ಮೆರೆದಿದ್ದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಕನ್ನಡ ಅಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು. ಈ ಬಾರಿ ಬಿಜೆಪಿ ಮಂಡಿಸಿದ ಬಜೆಟ್ 'ಜನಪರ ಮತ್ತು ಜನಪ್ರಿಯ' ಎಂದು ಬಣ್ಣಿಸಿದ ಅವರು, ಪ್ರಸಕ್ತ ಸಾಲಿನಲ್ಲಿ ಕನ್ನಡಕ್ಕೆ ಹೆಚ್ಚಿನ ಆದ್ಯತೆ ದೊರೆತಿದೆ ಎಂದರು. ನಿರಾಶದಾಯಕ ಬಜೆಟ್-ಸಿದ್ದರಾಮಯ್ಯ: ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ ರಾಜ್ಯದ ಅಭಿವೃದ್ದಿಗೆ ಏನು ಮಾಡಬೇಕು ಎಂಬುದರ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಗಂಭೀರ ಚಿಂತನೆ ನಡೆಸಿಲ್ಲದಿರುವುದು ಎದ್ದು ಕಾಣುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಟೀಕಿಸಿದ್ದಾರೆ. ರಾಜ್ಯದ ಅಭಿವೃದ್ದಿ ಬಗ್ಗೆ ನಿಖರ ದೃಷ್ಟಿಕೋನ ಇಲ್ಲ ಎಂದಿರುವ ಅವರು, ಬೆಳವಣಿಗೆಗೆ ಪೂರಕವಲ್ಲದ ನಿರಾಶದಾಯ ಬಜೆಟ್ ಇದಾಗಿದೆ ಎಂದು ದೂರಿದ್ದಾರೆ.ಸೌಂದರ್ಯವರ್ಧಕ ಬಜೆಟ್-ಟಿ.ಬಿ.ಜಯಚಂದ್ರ: ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಂಡಿಸಿದ್ದ ಈ ಬಜೆಟ್ ಕೇವಲ ಸೌಂದರ್ಯವರ್ಧಕ ಘೋಷಣೆಯ ಜನರ ಓಲೈಕೆಯದ್ದಾಗಿದೆ ಎಂದು ವಿಪಕ್ಷ ಉಪನಾಯಕ ಟಿ.ಬಿ.ಜಯಚಂದ್ರ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿಗಳು ಮಾಡಿದ್ದು ಬಜೆಟ್ ಭಾಷಣ ಅಲ್ಲ, ಅದು ಚುನಾವಣಾ ಭಾಷಣ. ಮತಗಿಟ್ಟಿಸುವ ತಂತ್ರಗಾರಿಕೆಯ ಬಜೆಟ್ ಇದು ಎಂದು ತಿಳಿಸಿದ್ದಾರೆ. |