ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಕನ್ನಡೇತರ ಚಿತ್ರಗಳ ಟಿಕೆಟ್ ಬೆಲೆ ಇಳಿದಿರುವುದು ಬಹುಭಾಷಾ ಚಿತ್ರಪ್ರೇಮಿಗಳನ್ನು ಖುಷಿಗೊಳಿಸಿದೆ. ಕನ್ನಡೇತರ ಚಲನಚಿತ್ರಗಳ ಮನರಂಜನಾ ತೆರಿಗೆಯನ್ನು ಶೇ 40ರಿಂದ 30ಕ್ಕೆ ಇಳಿಸಲಾಗಿದ್ದರೂ ಕೂಡ ಒಟ್ಟಾರೆಯಾಗಿ ವಜ್ರಮಹೋತ್ಸವ ಆಚರಿಸುತ್ತಿರುವ ಕನ್ನಡ ಚಿತ್ರರಂಗಕ್ಕೆ ನಿರಾಸೆ ಮೂಡಿಸಿದೆ.
ಜನರ ಮನರಂಜನೆಗೆ ಚಲನಚಿತ್ರಗಳು ಪ್ರಮುಖ ಮೂಲ. ಆದ್ದರಿಂದ ಮನರಂಜನಾ ತೆರಿಗೆ ಇಳಿಸಲಾಗಿದೆ. ಕನ್ನಡ ಚಿತ್ರಗಳು ನೂರಕ್ಕೆ ನೂರರಷ್ಟು ಮನರಂಜನಾ ತೆರಿಗೆಯಿಂದ ವಿನಾಯಿತಿ ಪಡೆಯುತ್ತಿವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಜೆಟ್ ಮಂಡನೆ ವೇಳೆ ತಿಳಿಸಿದ್ದಾರೆ.
ಅವೆಲ್ಲಕ್ಕಿಂತ ಹೆಚ್ಚಾಗಿ ಚಿತ್ರರಂಗಕ್ಕೆ ಪೈರಸಿ ದೊಡ್ಡ ಪಿಡುಗಾಗಿದ್ದು, ಇದರಿಂದ ಚಿತ್ರರಂಗಕ್ಕೆ ವಾರ್ಷಿಕ 150 ಕೋಟಿ ರೂ. ನಷ್ಟವಾಗುತ್ತಿದೆ. ಸಬ್ಸಿಡಿ ನೀಡಲು ಕೇವಲ 30 ಚಿತ್ರಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಎಲ್ಲಾ ಚಿತ್ರಗಳಿಗೆ ಸಬ್ಸಿಡಿ, ಪೈರಸಿ ಮಾಡುವವರ ವಿರುದ್ಧ ಗೂಂಡಾ ಕಾಯ್ದೆ ಜಾರಿ, ಫಿಲಂ ಸಿಟಿ ಅಭಿವೃದ್ದಿ, ಪ್ರದರ್ಶನ ತೆರಿಗೆ ವಿನಾಯಿತಿ ಸೇರಿದಂತೆ ಬಹುದಿನಗಳ ಹಲವು ಬೇಡಿಕೆಗಳ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲದಿರುವುದು ಚಿತ್ರರಂಗಕ್ಕೆ ನಿರಾಶೆ ಮೂಡಿಸಿದೆ.
ಕನ್ನಡ ಚಿತ್ರರಂಗ ಇಂದು ಸಂಕಷ್ಟದಲ್ಲಿದೆ. ಕಳೆದ ವರ್ಷ ಬಿಡುಗಡೆಯಾದ 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೇವಲ 8 ಮಾತ್ರ ಯಶಸ್ಸು ಕಂಡಿವೆ. ಆದರೆ ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿಲ್ಲ. ಚಿತ್ರರಂಗದ ಉತ್ತೇಜನಕ್ಕೆ ಯಾವುದೇ ಆಶಾದಾಯಕ ಕ್ರಮ ಪ್ರಕಟಿಸದಿರುವುದು ನಿರಾಶೆ ಮೂಡಿಸಿದೆ ಎಂದು ಚಿತ್ರಮಂಡಳಿಯ ಕಾರ್ಯದರ್ಶಿ ಥಾಮಸ್ ಡಿಸೋಜಾ ಹೇಳಿದ್ದಾರೆ.
ಐಟಿ ಬಿಟಿ ವಲಯಕ್ಕೂ ನಿರಾಶೆ:
ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದ್ದ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೂ ಈ ಬಜೆಟ್ ನಿರಾಸೆ ಮೂಡಿಸಿದೆ. ನೀರು, ವಿದ್ಯುತ್ ಸೇವಾ ಶುಲ್ಕಗಳಲ್ಲಿ ಕಡಿತಗೊಳಿಸಬಹುದೆಂಬ ನಿರೀಕ್ಷೆ ಉದ್ಯಮಕ್ಕಿತ್ತಾದರೂ ಈ ಬಗ್ಗೆ ಸರ್ಕಾರ ಯಾವುದೇ ಬದಲಾವಣೆ ಕೈಗೊಂಡಿಲ್ಲ. ಬದಲಾಗಿ ರಾಜ್ಯದ ಇತರ ನಗರಗಳಿಗೂ ಐಟಿ ಬಿಟಿ ಉದ್ಯಮವನ್ನು ವಿಸ್ತರಿಸುವ ಪ್ರಯತ್ನ ಮುಂದುವರಿದಿದೆ.
ಜೈವಿಕ ತಂತ್ರಜ್ಞಾನ ವಿಷನ್ ಗ್ರೂಪ್ ಶಿಫಾರಸ್ಸುಗಳನ್ನು ಪರಿಗಣಿಸಿ ಬೆಂಗಳೂರು ಹೊರಗಡೆ ಗುಲ್ಬರ್ಗದಂಥ ಪ್ರಮುಖ ನಗರಗಳಲ್ಲಿ ಬಯೋಟೆಕ್ ಪಾರ್ಕ್‌ಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಪ್ರಕಟಿಸಿದ್ದಾರೆ. |