ಪಬ್ ಮೇಲಿನ ದಾಳಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ರೇಣುಕಾ ಚೌಧುರಿ ವಿರುದ್ಧ ಇಲ್ಲಿನ ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.ಸಚಿವೆ ಚೌಧುರಿ ವಿರುದ್ದ ಎಫ್‌ಐಆರ್ ದಾಖಲಿಸಿಕೊಂಡ ಗ್ರಾಮಾಂತರ ಠಾಣೆ ಪೊಲೀಸರು, ಎಫ್‌ಐಆರ್ ಪ್ರತಿಯನ್ನು 3ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಿರುವುದಾಗಿ ಹೇಳಿದ್ದಾರೆ.ನಗರದ ಪಬ್‌ವೊಂದರ ಮೇಲೆ ಶ್ರೀರಾಮಸೇನೆ ದಾಳಿ ನಡೆಸಿದ ನಂತರ ರಾಷ್ಟ್ರದಾದ್ಯಂತ ವಿವಾದದ ಕಿಡಿ ಹೊತ್ತಿಕೊಂಡ ಘಟನೆಯ ಕುರಿತಂತೆ ಕೇಂದ್ರ ಸಚಿವೆ ಚೌಧುರಿ ಅವರು, ಮಂಗಳೂರು ತಾಲಿಬಾನೀಕರಣಗೊಳ್ಳುತ್ತಿದೆ ಎಂಬ ಹೇಳಿಕೆ ನೀಡಿದ್ದರು. ಸಚಿವರ ಹೇಳಿಕೆ ವಿರುದ್ಧ ಮಂಗಳೂರು ಮೇಯರ್ ಗಣೇಶ್ ಹೊಸಬೆಟ್ಟು ಸೇರಿದಂತೆ ಹಲವು ಸಂಘ-ಸಂಸ್ಥೆಗಳು ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು.ಮೊಕದ್ದಮೆ ಅರ್ಜಿಯ ವಿಚಾರಣೆ ನಡೆಸಿದ್ದ ನಗರದ 3ನೇ ಜೆಎಂಎಫ್‌ಸಿ ನ್ಯಾಯಾಲಯ, ಶೀಘ್ರವೇ ಚೌಧುರಿ ವಿರುದ್ದ ಎಫ್‌ಐಆರ್ ದಾಖಲಿಸುವಂತೆ ಗ್ರಾಮಾಂತರ ಠಾಣೆ ಪೊಲೀಸರಿಗೆ ಸೂಚನೆ ನೀಡಿತ್ತು. ಆದರೆ ನ್ಯಾಯಾಲಯದ ಆದೇಶದ ಬಳಿಕ ಚೌಧುರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಮೀನಮೇಷ ಎಣಿಸಲಾಗುತ್ತಿದೆ ಎಂಬ ದೂರು ಸಹ ಕೇಳಿ ಬಂದಿತ್ತು. |