ಮೇಲಾಧಿಕಾರಿಯ ಕಿರುಕುಳ ತಾಳಲಾರದೆ ಕೇಂದ್ರ ಮೀಸಲು ಒಡೆಯ ಪೇದೆಯೊಬ್ಬರು ಎ.ಕೆ.47 ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಯಲಹಂಕದಲ್ಲಿರುವ ಸಿಆರ್‌ಪಿಎಫ್ ಆವರಣದಲ್ಲಿ ಶುಕ್ರವಾರ ನಡೆದಿದೆ.
ಹರಿಯಾಣದ ಮಹೇಂದ್ರಗಢ ಜಿಲ್ಲೆಯ ವಿಲ್ಲಿಯಾನ ಗ್ರಾಮದ ರಾಮ್ ಕಿಶನ್ (39) ಆತ್ಮಹತ್ಯೆ ಮಾಡಿಕೊಂಡವರು. ರಾತ್ರಿ ಪಾಳಿ ಕೆಲಸದಲ್ಲಿದ್ದ ಅವರು ಬೆಳಿಗ್ಗೆ 4.45ಕ್ಕೆ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದು ಗುಂಡು ಅವರ ಗಂಟಲಿನಿಂದ ತೂರಿ ಹೊರಗೆ ಹಾರಿದೆ.
ಸಬ್ ಇನ್ಸ್‌ಪೆಕ್ಟರ್ ದರ್ಜೆಯ ಅಧಿಕಾರಿಯೊಬ್ಬರು ರಾಮ್ ಕಿಶನ್‌ಗೆ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 12 ವರ್ಷಗಳಿಂದ ರಾಮ್ ಕಿಶನ್ ಸಿಆರ್‌ಪಿಎಫ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಆತ್ಮಹತ್ಯೆಗೆ ನಿಖರ ಕಾರಣ ಏನೆಂದು ಈವರೆಗೆ ಗೊತ್ತಾಗಿಲ್ಲ. ಮೇಲಾಧಿಕಾರಿ ಕಿರುಕುಳ ನೀಡುತ್ತಿರುವುದಾಗಿ ಸಿಆರ್‌ಪಿಎಫ್ ಮೂಲಗಳು ದೂರಿವೆ. ಈ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಬಸವರಾಜ ಮಾಲಗತ್ತಿ ತಿಳಿಸಿದ್ದಾರೆ. |