ಇಲ್ಲಿನ ಸ್ಥಳೀಯ ಪತ್ರಿಕೆಯೊಂದರಲ್ಲಿ ಧರ್ಮಗುರುವೊಬ್ಬರ ಭಾವಚಿತ್ರ ಪ್ರಕಟಣೆ ಸಂಬಂಧಿಸಿದಂತೆ ಹೊತ್ತಿಕೊಂಡ ವಿವಾದದಿಂದಾಗಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, 3ದಿನಗಳ ಕಾಲ ನಿಷೇಧಾಜ್ಞೆ ಹೇರಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ರಾತ್ರಿ ಪತ್ರಿಕಾ ಕಚೇರಿಗೆ ನುಗ್ಗಿದ ಧರ್ಮಗುರುವಿನ ಬೆಂಬಲಿಗರು ದಾಂಧಲೆ ನಡೆಸಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದರು. ಪರಿಸ್ಥಿತಿ ಕೈಮೀರುತ್ತಿದ್ದಂತೆಯೇ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಪತ್ರಿಕೆಯ ಸಂಪಾದಕ ಸೇರಿದಂತೆ 19 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್ ಹೇಳಿದ್ದಾರೆ.
ಎಲ್ಲೆಡೆ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಮುನ್ನೆಚ್ಚರಿಕೆಯ ಅಂಗವಾಗಿ ಮೂರು ದಿನಗಳ ಕಾಲ ನಿಷೇಧಾಜ್ಞೆ ಹೇರಲಾಗಿದೆ ಎಂದು ಅವರು ತಿಳಿಸಿದರು.
ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದ್ದು, ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ. ಈವರೆಗೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. |