ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕಾದ ಸರ್ಕಾರಗಳೇ ಅದಕ್ಕೆ ಕುಮ್ಮುಕ್ಕು ನೀಡುತ್ತಿವೆ ಎಂದು ಲೋಕಾಯುಕ್ತ ಸಂತೋಷ್ ಹೆಗ್ಡೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಹರಿಹಾಯ್ದಿದ್ದಾರೆ.
ಲೋಕಾಯುಕ್ತರ ಕಚೇರಿಯಲ್ಲಿ ಶನಿವಾರ ಟ್ರಾನ್ಸ್‌ಫೆರೆನ್ಸಿ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ನಿರ್ಮೂಲನೆ, ಕಾನೂನು ಬಲಪಡಿಸುವ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಕೆಲ ಕಾಯ್ದೆಗೆ ತಿದ್ದುಪಡಿ ತಂದ ಹಿನ್ನೆಲೆಯಲ್ಲಿ ಭ್ರಷ್ಟಾಚಾರಕ್ಕೆ ಹೆಚ್ಚು ಒತ್ತು ನೀಡಿದಂತಾಗಿದೆ. 1988ರಲ್ಲಿ ಮೂರು ಕಲಂಗಳಿಗೆ ತಿದ್ದುಪಡಿ ತಂದಿದ್ದರಿಂದ ನಿವೃತ್ತ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸುವಂತಿಲ್ಲ, ಒಂದು ವೇಳೆ ವಿಚಾರಣೆಗೆ ಒಳಪಡಿಸಲು ಸರಕಾರದ ಅನುಮತಿ ಬೇಕು.
ಮತ್ತೊಂದು ಕಲಂ ಪ್ರಕಾರ ಯಾವುದೇ ಅಧಿಕಾರಿಗಳಿಂದ ಉದ್ದೇಶಪೂರ್ವಕವಾಗಿ ಸರಕಾರ ಅಥವಾ ಸಾರ್ವಜನಿಕರ ಆಸ್ತಿಪಾಸ್ತಿ ಕಬಳಿಸಿದ್ದರೆ ನೇರವಾಗಿ ಕೆಲ ಸಂಸ್ಥೆಗಳೇ ತನಿಖೆ ಮಾಡಬಹುದಾಗಿತ್ತು. ಆದರೆ, ಅದನ್ನೂ ಸರಕಾರದ ಅನುಮತಿ ಇಲ್ಲದೆ ಮಾಡುವಂತಿಲ್ಲ ಎಂದು ದೂರಿದರು.
ಅಧಿಕಾರಿಗಳು ಆಸ್ತಿ ವಿವರ ಸಲ್ಲಿಸುವ ಆಧಾರದ ಮೇಲೆ ತನಿಖೆ ನಡೆಸಬೇಕು. ಆದರೆ, ಪ್ರಮಾಣಪತ್ರವೇ ಸಿಗದಂತೆ ಮಾಡಲಾಗಿದೆ. ಅಧಿಕಾರಿಗಳು ಸಲ್ಲಿಸುವ ಪ್ರಮಾಣ ಪತ್ರವನ್ನು ಗೌಪ್ಯವಾಗಿ ಇಡುವಂತಹ ವ್ಯವಸ್ಥೆ ಇದೆ. ಹೀಗಾಗಿ ಭ್ರಷ್ಟಾಚಾರ ನಿಯಂತ್ರಿಸುವುದು ಕಷ್ಟಸಾಧ್ಯ ಎಂದರು. |