ರಾಷ್ಟ್ರೀಯ ಆಧುನಿಕ ಕಲಾ ಗ್ಯಾಲರಿಯ ಉದ್ಘಾಟನಾ ಸಮಾರಂಭ ಸಂದರ್ಭದಲ್ಲಿ ಕಲಾವಿದರ ಜೊತೆ ಅನುಚಿತವಾಗಿ ವರ್ತಿಸಿ ಕಲಾವಿದ ಸಮುದಾಯವನ್ನು ಅವಹೇಳನಕಾರಿಯಾಗಿ ನಿಂದಿಸಿರುವ ಸಚಿವ ರಾಮಚಂದ್ರೇಗೌಡರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಸಾಹಿತಿ-ಕಲಾವಿದರ ಒಕ್ಕೂಟ ತಿಳಿಸಿದೆ.
ಆಧುವಿಕ ಕಲಾವಿದರು ಉಗ್ರವಾದಿಗಳೆಂದು ಕರೆಯುವ ಮೂಲಕ ಸಚಿವರು ಇಡೀ ಕಲಾವಿದ ಸಮುದಾಯವನ್ನೇ ಅಪಮಾನಿಸಿದ್ದು ಇವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಸಾಹಿತಿ ಕಲಾವಿದರ ಒಕ್ಕೂಟದ ಪರವಾಗಿ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶ್ರೀನಿವಾಸ ಕಪ್ಪಣ್ಣ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಮಾರಂಭದಲ್ಲಿ ಸಚಿವರ ವರ್ತನೆಯನ್ನು ಖಂಡಿಸಿದ ಖ್ಯಾತ ಕಲಾವಿದ ಎಂ.ಎಸ್.ಮೂರ್ತಿ ಅವರ ಜೊತೆ ಅನಾಗರಿಕವಾಗಿ ವರ್ತಿಸಿರುವುದನ್ನು ಸಾಂಸ್ಕೃತಿಕ ವಲಯದ ಎಲ್ಲರೂ ತೀವ್ರವಾಗಿ ಖಂಡಿಸಿದ್ದು, ಸಚಿವರ ವರ್ತನೆ ವಿರೋಧಿಸಿ ಭಾನುವಾರ ಟೌನ್‌ಹೌಲ್ ಮುಂಭಾಗ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದರು.
ಸಾರ್ವಜನಿಕರ ಪ್ರತಿನಿಧಿಯಾಗಿರುವ ಸಚಿವರು ಸಂಯಮ ಮೀರಿ ಸರ್ವಾಧಿಕಾರಿಯಂತೆ ವರ್ತಿಸಿ ಕಲಾವಿದರಿಗೆ ಅವಮಾನ ಮಾಡಿದ್ದು, ಪ್ರಬುದ್ಧವಾಗಿ ಅವಿವೇಕಿಯಂತೆ ಮಾತನಾಡಿರುವ ಸಚಿವ ರಾಮಚಂದ್ರೇಗೌಡರನ್ನು ಸಂಪುಟದಿಂದ ವಜಾ ಮಾಡುವಂತೆ ಅವರು ಆಗ್ರಹಿಸಿದರು. |