ನಗರದ ಎಮ್ನೇಶಿಯ ಪಬ್ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 'ನಿಮ್ಮನ್ನು ಯಾಕೆ ಗಡಿಪಾರು ಮಾಡಬಾರದು' ಎಂದು ಕಾರಣ ಕೇಳಿ ಶ್ರೀರಾಮಸೇನೆಯ 12 ಕಾರ್ಯಕರ್ತರಿಗೆ ಶನಿವಾರ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಪಬ್ ದಾಳಿಯ ಬಳಿಕ ಮಂಗಳೂರು ತಾಲಿಬಾನೀಕರಣಗೊಳ್ಳುತ್ತಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ರೇಣುಕಾ ಚೌಧುರಿ ವಿರುದ್ಧ ಗ್ರಾಮಾಂತರ ಪೊಲೀಸರು ಎಫ್‌ಐಆರ್ ದಾಖಲಿಸಿ ಕೋರ್ಟ್‌ಗೆ ಸಲ್ಲಿಸಿದ ಬೆನ್ನಲ್ಲೇ, ಶ್ರೀರಾಮಸೇನೆಯ ಕಾರ್ಯಕರ್ತರಿಗೂ ನೋಟಿಸ್ ಜಾರಿ ಮಾಡುವ ಮೂಲಕ ಮತ್ತೊಂದು ಉರುಳಲ್ಲಿ ಸಿಲುಕಿಕೊಂಡಂತಾಗಿದೆ.
ಪಬ್ ಮೇಲೆ ಸ್ವಯಂಘೋಷಿತರಾಗಿ ದಾಳಿ ಮಾಡಿ, ಹಲ್ಲೆ ನಡೆಸಿದ ನಿಮ್ಮನ್ನು ಯಾಕೆ ಗಡಿಪಾರು ಮಾಡಬಾರದು ಎಂದು ಕಾರಣ ಕೇಳಿ ಶ್ರೀರಾಮಸೇನೆಯ ಪ್ರಸಾದ್ ಅತ್ತಾವರ ಸೇರಿದಂತೆ 12ಜನರಿಗೆ ನೋಟಿಸ್ ಜಾರಿ ಮಾಡಿದ್ದು, 30ದಿನದೊಳಗೆ ಉತ್ತರ ನೀಡುವಂತೆ ಸೂಚನೆ ನೀಡಿದ್ದಾರೆ.
ಪೊಲೀಸರು ನೀಡಿದ ನೋಟಿಸ್‌ಗೆ ಪ್ರತಿಕ್ರಿಯಿಸಿದ ಶ್ರೀರಾಮಸೇನೆಯ ಕಾರ್ಯಕರ್ತರು, ಪಬ್‌ನಲ್ಲಿ ನಡೆಯುತ್ತಿರುವ ಅಶ್ಲೀಲ ಕೃತ್ಯವನ್ನು ತಡೆಯಲು ನಾವು ಹೋಗಿದ್ದೇವೆ. ಆ ನಿಟ್ಟಿನಲ್ಲಿ ನಮ್ಮ ಮೇಲೆ ಗಡಿಪಾರಿನಂತಹ ಕ್ರಮಕೈಗೊಳ್ಳುವುದು ಸಮಂಜಸವಲ್ಲ ಎಂದು ತಿಳಿಸಿದ್ದಾರೆ. |