ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜಕೀಯವಾಗಿ ನಿಷ್ಠೆ ತೋರುವುದಿಲ್ಲ ಎಂದು ಸಿದ್ದರಾಮಯ್ಯ ಅವರ ಬಲಗೈ ಬಂಟ ಎಂದೇ ಹೆಸರಾಗಿದ್ದ ಶಾಸಕ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಧ್ಯಕ್ಷ ಆರ್.ವರ್ತೂರು ಪ್ರಕಾಶ್ ಹೇಳುವ ಮೂಲಕ ತಮ್ಮ ನಿಷ್ಠೆ ಬದಲಾಯಿಸಿದ್ದಾರೆ.
ಸಿದ್ದರಾಮಯ್ಯ ತಮ್ಮ ರಾಜಕೀಯ ಗುರು. ಅವರ ಜೊತೆ ಸೇರಿ ಪ್ರತ್ಯೇಕ ಪಕ್ಷ ಕಟ್ಟಲಾಗುವುದು ಎಂದು ಹೇಳುತ್ತಿದ್ದ ವರ್ತೂರು ಪ್ರಕಾಶ್ ಈಗ ದಿಢೀರನೇ ಈ ರೀತಿ ಹೇಳಿಕೆ ನೀಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಲ್ಲಿಯೇ ಉಳಿಯುವ ನಿರ್ಧಾರ ಮಾಡಿದ ಮೇಲೆ ತಮ್ಮ ನಿಷ್ಠೆ ಬದಲಾಗಿದೆ ಎಂದಿದ್ದಾರೆ. ಈವರೆಗೂ ಸಿದ್ದರಾಮಯ್ಯ ಅವರ ಒಡನಾಡಿಯಾಗಿದ್ದೆ. ಜನಾಂಗದ ಮುಖಂಡರೆಂಬ ಕಾರಣಕ್ಕೆ ಅವರ ಮೇಲೆ ಪ್ರೀತಿ ಇದೆ. ಆದರೆ ಅವರಿಗೆ ರಾಜಕೀಯ ನಿಷ್ಠನಾಗಿರುವುದಿಲ್ಲ ಎಂದು ವರ್ತೂರು ಹೇಳಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ಹೇಳಿದ್ದಾರೆ. ಶೀಘ್ರದಲ್ಲಿಯೇ ಬಿಜೆಪಿಯಲ್ಲಿ ತಮಗೆ ಉನ್ನತ ಸ್ಥಾನ ಸಿಗಲಿದೆ. ಒಂದೆರಡು ದಿನಗಳಲ್ಲಿ ಈ ಕುರಿತು ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು ಅವರು ಹೇಳಿದರು. |