ರಾಜ್ಯದ ಪ್ರಸಕ್ತ ಸಾಲಿನ ಯೋಜನಾ ವೆಚ್ಚದ ವಿವರ ಕುರಿತು ಶ್ವೇತ ಪ್ರತ್ರ ಹೊರಡಿಸುವಂತೆ ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಆಗ್ರಹಿಸಿದ್ದಾರೆ.
2008-09ನೇ ಸಾಲಿನ 26 ಸಾವಿರ ಕೋಟಿ ಯೋಜನಾ ವೆಚ್ಚದ ಪೈಕಿ ಈವರೆಗೆ ಕೇವಲ 11 ಸಾವಿರ ಕೋಟಿ ರೂಪಾಯಿ ಮಾತ್ರವೇ ವೆಚ್ಚವಾಗಿದೆ. ಇನ್ನೂ 26 ಕೋಟಿ ರೂ. ವೆಚ್ಚವಾಗಿಲ್ಲ. ಇನ್ನು ಒಂದೂವರೆ ತಿಂಗಳಲ್ಲಿ ಇಷ್ಟೊಂದು ಹಣ ವೆಚ್ಚ ಮಾಡಲು ಹೇಗೆ ಸಾಧ್ಯ? ಆದರೂ ಅನಗತ್ಯವಾಗಿ ಯೋಜನಾ ಮಿತಿಯನ್ನು ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು.
ಹಣಕಾಸು ಹೊಣೆಗಾರಿಕೆ ಕಾಯ್ದೆಗೆ ವಿರುದ್ಧವಾಗಿ ಸರ್ಕಾರ ನಡೆದುಕೊಂಡಿರುವ ಕಾರಣಕ್ಕಗಿ ಪ್ರಸಕ್ತ ಸಾಲಿನಲ್ಲಿ 9 ಕೋಟಿ ರೂ.ಗಳಿಗೂ ಕೊರತೆ ಎದುರಾಗಿದೆ. ಈ ಎಲ್ಲ ಸಂಗತಿಗಳ ಕುರಿತು ಸತ್ಯಸಂಗತಿ ಜನರಿಗೆ ತಿಳಿಯುವಂತಾಗಲು ಕೂಡಲೇ 2008-09ನೇ ಸಾಲಿನ ಯೋಜನಾ ವೆಚ್ಚದ ಕುರಿತು ಶ್ವೇತಪತ್ರ ಹೊರಡಿಸಬೇಕು ಎಂದು ಅವರು ಒತ್ತಾಯಿಸಿದರು.
2009-10ನೇ ಸಾಲಿನ ಮುಂಗಡ ಪತ್ರ ಜನರ ಕಣ್ಣೊರೆಸುವ ತಂತ್ರವಾಗಿದ್ದು, ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಮಠ, ಮಂದಿರಗಳಿಗೆ ಮನಬಂದಂತೆ ಹಣ ಹಂಚಲಾಗಿದೆ ಎಂದು ಅವರು ದೂರಿದರು. |