ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಿರುದ್ಧ ಪ್ರವಾಸೋದ್ಯಮ, ಮೂಲಸೌಕರ್ಯ ಅಭಿವೃದ್ದಿ ಸಚಿವ ಜಿ.ಜನಾರ್ದನ ರೆಡ್ಡಿ ಮತ್ತೆ ವಾಗ್ದಾಳಿ ನಡೆಸಿದ್ದು, ಉದ್ದೇಶಿತ ಜಾಗದಲ್ಲೇ ಬಳ್ಳಾರಿ ವಿಮಾನ ನಿಲ್ದಾಣ ನಿರ್ಮಿಸಲಾಗುವುದು ಎಂದು ತಿರುಗೇಟು ನೀಡಿದ್ದಾರೆ.ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರು, ಮುಖಂಡರ ಜಿಲ್ಲಾ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ವಿಮಾನ ನಿಲ್ದಾಣ ಯೋಜನೆ ವಿರೋಧಿಸಿರುವ ಗೌಡರ ವಿರುದ್ಧ ಹರಿಹಾಯ್ದರು.ಬಳ್ಳಾರಿ ಮತ್ತು ಹಾಸನದಲ್ಲಿ ವಿಮಾನ ನಿಲ್ದಾಣಗಳನ್ನು ಇನ್ನು 2-3 ವರ್ಷಗಳಲ್ಲಿ ಉದ್ಘಾಟಿಸುವುದನ್ನು ದೇವೇಗೌಡರು ನೋಡಬೇಕು. ಅದಕ್ಕಾಗಿ ಅವರಿಗೆ ಆಯುಸ್ಸು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದರು.ವಿಮಾನ ನಿಲ್ದಾಣ ಯೋಜನೆ ಕೈಬಿಡದಿದ್ದರೆ ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ಮಾಡುವುದಾಗಿ ಗೌಡರು ಎಚ್ಚರಿಕೆ ನೀಡಿದ್ದಾರೆ. ಆದರೆ ಬಳ್ಳಾರಿ ಜಿಲ್ಲೆಯ ಗ್ರಾಮ ಪಂಚಾಯ್ತಿ ಸದಸ್ಯರ ಮನೆ ಮುಂದೆ ಧರಣಿ ಮಾಡುವುದಕ್ಕೂ ಅವರಿಗೆ ಯೋಗ್ಯತೆ ಇಲ್ಲ ಎಂದು ಕಿಡಿಕಾರಿದರು. |