ನಗರದ ಎಮ್ಮೇಶಿಯಾ ಪಬ್ ದಾಳಿಯ ಹಿನ್ನೆಲೆಯಲ್ಲಿ ಹಾಗೂ ಪ್ರಚೋದನಾತ್ಮಕ ಹೇಳಿಕೆ ನೀಡುವ ಕಾರಣಕ್ಕಾಗಿ ಶ್ರೀರಾಮಸೇನೆಯ ಸ್ಥಾಪಕ ಪ್ರಮೋದ್ ಮುತಾಲಿಕ್‌ಗೆ ಮಂಗಳೂರಿಗೆ ಕಾಲಿರಿಸದಂತೆ ನೋಟಿಸ್ ನೀಡಲು ಸಿದ್ದತೆ ನಡೆದಿದೆ.
ಪ್ರಮೋದ್ ಮುತಾಲಿಕ್ ದಕ್ಷಿಣ ಕನ್ನಡ ಜಿಲ್ಲೆಗೆ ಕಾಲಿರಿಸಬಾರದು ಎಂಬ ಆದೇಶ ನೀಡಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಂದಾಗಿದ್ದಾರೆ. ಈ ಬಗ್ಗೆ ಮುತಾಲಿಕ್‌ಗೆ ವಾರದೊಳಗೆ ಮಂಗಳೂರು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ನೋಟಿಸ್ ನೀಡುವ ಸಾಧ್ಯತೆ ಇದೆ.
ಮಂಗಳೂರಿನ ಎಮ್ಮೇಶಿಯಾ ಪಬ್‌ನಲ್ಲಿ ಇತ್ತೀಚೆಗೆ ನಡೆದ ಶ್ರೀರಾಮಸೇನೆ ಕಾರ್ಯಕರ್ತರ ದಾಳಿಯ ಬಳಿಕ ಮುತಾಲಿಕ್ ಹೇಳಿಕೆಯಿಂದ ಸಮಾಜದಲ್ಲಿ ಪ್ರಚೋದನೆ ಕಾರಣವಾಗಿದೆ. ಮುತಾಲಿಕ್ ಅವರು ನೋಟಿಸ್ ಪಡೆದ ಬಳಿಕ ಸ್ವತಃ ಬಂದು ಜಿಲ್ಲಾಧಿಕಾರಿಗಳು ನ್ಯಾಯಾಲಯದ ಮುಂದೆ ಹಾಜರಾಗಬಹುದು ಅಥವಾ ಅವರ ಪರ ವಕೀಲರು ಹಾಜರಾಗಬಹುದು. ಒಂದು ವೇಳೆ ಹಾಜರಾಗದಿದ್ದರೆ ಈ ಆದೇಶ ಜಾರಿಗೊಳಿಸುತ್ತೇವೆ ಎಂದು ಪೊನ್ನುರಾಜ್ ದಿನಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
ಈಗಾಗಲೇ ಶ್ರೀರಾಮಸೇನೆಯ ರಾಜ್ಯ ಸಹ ಸಂಚಾಲಕ ಪ್ರಸಾದ್ ಅತ್ತಾವರ, ಸುಭಾಸ್ ಪಡೀಲ್ ಸೇರಿದಂತೆ ಐವರಿಗೆ ಜಿಲ್ಲಾ ಗಡೀಪಾರು ನೋಟಿಸ್ ಜಾರಿಗೊಳಿಸಲಾಗಿದೆ. ಅವರ ವಿಚಾರಣೆ ಫೆ.24ರಂದು ಮಂಗಳೂರು ತಾಲೂಕು ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ ನಡೆಯಲಿದೆ. |