ಸಚಿವ ಶ್ರೀರಾಮುಲು ಅವರನ್ನು ಪ್ರವಾದಿ ಮೊಹಮ್ಮದ್ ಪೈಗಂಬರರಿಗೆ ಹೋಲಿಸಿ ಸಚಿವ ಮಮ್ತಾಜ್ ಅಲಿ ಖಾನ್ ಹೇಳಿಕೆ ನೀಡಿರುವುದನ್ನು ಆಕ್ಷೇಪಿಸಿ ಸೋಮವಾರ ಮುಸ್ಲಿಂ ಸಂಘಟನೆಗಳು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ಶನಿವಾರ ಬಳ್ಳಾರಿ ಪ್ರವಾಸದಲ್ಲಿದ್ದ ಕಾರ್ಮಿಕ ಮತ್ತು ವಕ್ಫ್ ಖಾತೆ ಸಚಿವ ಮಮ್ತಾಜ್ ಅಲಿ ಖಾನ್ ಅವರು ಕಾರ್ಯಕ್ರಮವೊಂದರಲ್ಲಿ, ಆರೋಗ್ಯ ಸಚಿವ ಶ್ರೀರಾಮುಲು ಬಡವರ ಬಂಧು, ಜಾತಿ-ಮತ ಎಣಿಸದೆ ಎಲ್ಲ ವರ್ಗದವರಿಗೂ ಸಹಾಯ ಮಾಡುತ್ತಿರುವ ಅವರು ಪೈಗಂಬರ್ ಇದ್ದ ಹಾಗೆ ಎಂದು ಹೇಳಿದ್ದರು ಎಂದು ವರದಿ ಮಾಡಿದ್ದವು. ಆದರೆ ಸಚಿವರ ಈ ಹೇಳಿಕೆ ಮುಸ್ಲಿಂ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿತ್ತು.
ಇಂದು ಶಿವಮೊಗ್ಗಕ್ಕೆ ತೆರಳಿರುವ ಸಚಿವರಿಗೆ ಮುಸ್ಲಿಂ ಸಂಘಟನೆಗಳು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ, ಕ್ಷಮೆ ಯಾಚಿಸಬೇಕು ಎಂದು ಪಟ್ಟು ಹಿಡಿದವು, ಒಂದು ಹಂತದಲ್ಲಿ ಇತ್ತಂಡಗಳ ಬೆಂಬಲಿಗರ ನಡುವೆ ಹೊಯ್-ಕೈ ನಡೆದಾಗ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ನಾನು ಹೋಲಿಕೆ ಮಾಡಿಲ್ಲ: ನಾನು ಆ ರೀತಿಯಾಗಿ ಹೋಲಿಸಿ ಮಾತನಾಡಿಯೇ ಇಲ್ಲ ಎಂದು ಸ್ಪಷ್ಟನೆ ನೀಡಿರುವ ಸಚಿವ ಖಾನ್, ದಿನಪತ್ರಿಕೆಯೊಂದು ಹಾಗೂ ಬಳ್ಳಾರಿಯ ಪತ್ರಿಕೆ ಕೆಲವು ತಪ್ಪಾಗಿ ವರದಿ ಮಾಡಿರುವುದಾಗಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಸಮಜಾಯಿಷಿ ನೀಡಿದರು. ಸದಾ ಬಡವರ ಪರ ಸಹಾಯ ಹಸ್ತ ಚಾಚುತ್ತಿದ್ದ ಪೈಗಂಬರರ ಪ್ರಭಾವ ಸಚಿವ ಶ್ರೀರಾಮುಲು ಮೇಲೆ ಬಿದ್ದಿದೆ ಎಂದು ಹೇಳಿರುವೆ, ಆದರೆ ಮಾಧ್ಯಮಗಳು ತಪ್ಪಾಗಿ ವರದಿ ಪ್ರಕಟಿಸಿವೆ ಎಂದು ಆರೋಪಿಸಿದರು. |