ಬಸ್ಸಿನಲ್ಲಿ ಗಲೀಜಿದ್ದರೆ ಚಾಲಕರಿಗೆ, ನಿರ್ವಾಹಕರಿಗೆ ಒದೆಯಿರಿ ಎಂದ ಸಾರಿಗೆ ಸಚಿವ ಆರ್.ಅಶೋಕ್ ಅವರ ಹೇಳಿಕೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರ ಫೆಡರೇಷನ್ ಮತ್ತು ಯುನೈಟೆಡ್ ಎಂಪ್ಲಾಯೀಸ್ ಯೂನಿಯನ್ ತೀವ್ರವಾಗಿ ಖಂಡಿಸಿದೆ.
ತಪ್ಪು ಮಾಡಿದವರಿಗೆ ಒದೆಯುವುದು ಸರಿ ಎನ್ನುವುದಾದರೆ ಸಚಿವ, ಶಾಸಕರಲ್ಲೂ ತಪ್ಪು ಮಾಡಿದವರಿದ್ದಾರೆ. ಅವರಿಗೆ ಮೊದಲು ಒದೆಯಿರಿ ಇಲ್ಲವಾದರೆ ಕ್ಷಮೆ ಕೋರಿ ಎಂದು ಫೆಡರೇಶನ್ ಅಧ್ಯಕ್ಷ ಹೆಚ್.ಡಿ.ರೇವಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಗ್ಗದ ಪ್ರಚಾರ ನೀಡುವುದನ್ನು ಬಿಟ್ಟು ಪ್ರತ್ಯೇಕವಾಗಿ ಸ್ವಚ್ಛತಾ ಸಿಬ್ಬಂದಿ ನೇಮಿಸಿ ಎಂದು ಅವರು ಸಚಿವರಿಗೆ ತಿರುಗೇಟು ನೀಡಿದ್ದಾರೆ.
ಒಂದು ವಾರದಲ್ಲಿ ಸಚಿವ ಆರ್.ಅಶೋಕ್ ಅವರು ಚಾಲಕ ಮತ್ತು ನಿರ್ವಾಹಕರಲ್ಲಿ ಕ್ಷಮೆ ಕೋರಿ ಹೇಳಿಕೆಯನ್ನು ವಾಪಸ್ಸು ಪಡೆಯದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವುದರೊಂದಿಗೆ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆ ಎಚ್ಚರಿಕೆ ನೀಡಿದೆ. |