ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಯವರಿಗೆ ವಿಳಾಸವೇ ಇಲ್ಲ ಎಂದು ಕಟುವಾಗಿ ಟೀಕಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜಕೀಯ ಆಶ್ರಯವಿಲ್ಲದ ಕಾರಣ ಮೊಯ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಗೃಹಸಚಿವ ಡಾ.ವಿ.ಎಸ್.ಆಚಾರ್ಯ ಸರಿಯಾಗಿ ಅಧಿಕಾರ ನಡೆಸಲು ಯಡಿಯೂರಪ್ಪ ಮತ್ತು ಮಕ್ಕಳು ಬಿಡುತ್ತಿಲ್ಲ ಎಂಬ ಹೇಳಿಕೆ ನೀಡಿರುವ ಮೊಯ್ಲಿ ಬಗ್ಗೆ ಗೌರವವಿದೆ. ಆದರೆ ರಾಜಕೀಯ ಆಶ್ರಯವಿಲ್ಲ ಎಂಬ ಕಾರಣಕ್ಕೆ ಆ ಮಾಜಿ ಸಿಎಂ ಹೀಗೆ ಬಡಬಡಿಸುತ್ತಿದ್ದಾರೆ ಎಂದು ಕುಹಕವಾಡಿದರು.
ಇತ್ತೀಚೆಗಷ್ಟೇ ಉಡುಪಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಮೊಯ್ಲಿಯವರು ಸುದ್ದಿಗಾರರೊಂದಿಗೆ ಮಾತನಾಡುತ್ತ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿರುವ ಗೃಹಸಚಿವ ಆಚಾರ್ಯ, ಸಂಘಪರಿವಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಅಲ್ಲದೇ ಯಡಿಯೂರಪ್ಪ ಮತ್ತು ಅವರ ಮಕ್ಕಳು ಅಧಿಕಾರ ಚಲಾಯಿಸಲು ಅವರಿಗೆ ಮೂಗುದಾರ ಹಾಕಿದ್ದಾರೆ ಎಂಬುದಾಗಿ ಹೇಳಿಕೆ ನೀಡಿದ್ದರು. |