ಶ್ರೀರಾಮಸೇನೆ ಪಬ್ ಮೇಲೆ ದಾಳಿ ನಡೆಸಿದ ಘಟನೆ ಕುರಿತಂತೆ ಮಂಗಳೂರು ತಾಲಿಬಾನ್ ಆಗುತ್ತಿದೆ ಎಂಬ ವಿವಾದಿತ ಹೇಳಿಕೆ ನೀಡಿದ ಕೇಂದ್ರ ಸಚಿವೆ ರೇಣುಕಾ ಚೌಧುರಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಂಡ ಬೆನ್ನಲ್ಲೇ, ಇದೀಗ ಮಹಾನಗರ ಪಾಲಿಕೆ ಮೇಯರ್ ವಿರುದ್ಧವೇ ಕೇಸು ದಾಖಲಿಸಲು ಕಾಂಗ್ರೆಸ್ ಸಜ್ಜಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಬೊಂಡಾಲ ಜಗನ್ನಾಥ ಶೆಟ್ಟಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೇಣುಕಾಗೆ ಮಾನಸಿಕ ಸ್ಥಿರತೆ ಇಲ್ಲ ಎಂದು ಹೇಳುವ ಮೂಲಕ ಮೇಯರ್ ಗಣೇಶ್ ಹೊಸಬೆಟ್ಟು ಸಚಿವೆ ರೇಣುಕಾಗೆ ಅಪಮಾನ ಮಾಡಿದ್ದಾರೆ. ಹಾಗಾಗಿ ಹೊಸಬೆಟ್ಟು ವಿರುದ್ದ ಹೈದರಾಬಾದ್, ದೆಹಲಿಯಲ್ಲಿ ದೂರು ದಾಖಲಿಸಲು ಕಾಂಗ್ರೆಸ್ ಮುಖಂಡರು ಚಿಂತಿಸಿದ್ದಾರೆ ಎಂದು ಬೊಂಡಾಲ ವಿವರಿಸಿದ್ದಾರೆ.
ರೇಣುಕಾ ವಿರುದ್ದ ದೂರು ದಾಖಲಿಸಿರುವ ಮೇಯರ್, ಮಂಗಳೂರಿನ ಅನಧಿಕೃತ ಪಬ್‌ಗಳ ಬಗ್ಗೆ ಯಾಕೆ ತುಟಿ ಬಿಚ್ಚುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ರೇಣುಕಾ ವಿರುದ್ಧ ಕೇಸು ದಾಖಲಿಸುವ ಮೂಲಕ ಬಿಜೆಪಿ ಮಹಿಳಾ ವಿರೋಧಿ ಧೋರಣೆ ಅನುಸರಿಸಿದೆ ಎಂದು ದೂರಿದರು.
ಪಬ್ ಮೇಲಿನ ದಾಳಿ ಪ್ರಕರಣದ ಹೇಳಿಕೆಗಳು ಇದೀಗ ರಾಜಕೀಯ ತಿರುವು ಪಡೆದುಕೊಳ್ಳತೊಡಗುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಗೆ ಅಖಾಡ ಸಿದ್ದಪಡಿಸುತ್ತಿರುವುದು ಸ್ಪಷ್ಟವಾಗತೊಡಗಿದೆ. |