ಮಠಗಳು ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡುವುದು ಹೊಸದಲ್ಲ. ನೈಸ್ ಕಂಪೆನಿಯ ಮಾಲೀಕ ಅಶೋಕ್ ಖೇಣಿಯಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಸಾಕಷ್ಟು ಫಲವನ್ನು ಉಂಡಿವೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಠಗಳ ಆಧಾರದ ಮೇಲೆ ಬಜೆಟ್ ರೂಪಿತವಾಗುವ ಹೊಸ ಅಧ್ಯಾಯ ಈಗ ರಾಜ್ಯದಲ್ಲಿ ಆರಂಭವಾಗಿದೆ. ಮಠಗಳನ್ನು ಭಕ್ತಾದಿಗಳು ಬೆಳೆಸಬೇಕೇ ಹೊರತು ಬಡ ಜನರ ತೆರಿಗೆಯಿಂದಲ್ಲ ಎಂದರು.ಮಠಗಳು ರಾಜಕಾರಣ ಮಾಡುತ್ತಿರುವುದು ಹೊಸದೇನಲ್ಲ. ಹಿಂದೆ ಚಿತ್ರದುರ್ಗ ಮತ್ತು ಸಿರಿಗೆರೆ ಮಠಗಳು ಏನು ಮಾಡಿದವು, ನಿಜಲಿಂಗಪ್ಪನವರನ್ನು ಸೋಲಿಸಿದ್ದು ಯಾರು? ಹೊಸದುರ್ಗದ ರಂಗಪ್ಪನವರನ್ನು ಗಲ್ಲಿಸಲು ಅಂತರಂಗದೊಳಗೆ ಪಣ ತೊಟ್ಟಿದ್ದವರು ಯಾರು? ಎಂಬುದು ತಮಗೆ ಗೊತ್ತಿದೆ ಎಂದರು.ರಾಜ್ಯಾದ್ಯಂತ ಮಳೆ, ಬೆಳೆ ಇಲ್ಲದೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಒಬ್ಬ ಮಠಾಧೀಶರಾದರೂ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ನೀಡುವುದು ಬೇಡ, ಬದಲಾಗಿ ಸಾಂತ್ವನವನ್ನಾದರೂ ಹೇಳಿದ್ದಾರೆಯೇ ಎಂದು ಗೌಡರು ಗುಡುಗಿದರು. ಒಂದೇ ನಾಣ್ಯದ ಎರಡು ಮುಖಗಳಂತಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಖೇಣಿಯವರ ಫಲಾನುಭವಿಗಳು. 30 ಸಾವಿರ ಕೋಟಿ ರೂ.ಲಪಟಾಯಿಸಿರುವುದು ಖೇಣಿ ದುಡ್ಡಲ್ಲ. ಅದು ನನ್ನ ರೈತರ ದುಡ್ಡು. ಆ ಹಣ ರಾಷ್ಟ್ರೀಯ ಪಕ್ಷಗಳ ಪಾಲಾಗಿವೆ. ಇದರಲ್ಲಿ ಯಾರು ಎಷ್ಟೆಷ್ಟು ಹಂಚಿಕೊಂಡಿದ್ದಾರೆ ಎಂಬುದನ್ನು ಚುನಾವಣಾ ಅಖಾಡದಲ್ಲಿ ಹೇಳುತ್ತೇನೆ ಎಂದರು. |