ಸಿದ್ದರಾಮಯ್ಯನವರಿಗೆ ಸೂಕ್ತ ಸ್ಥಾನ ಕಲ್ಪಿಸಲು ಕಾಂಗ್ರೆಸ್ ಮುಂದಾಗಿದ್ದರೆ, ಮತ್ತೊಂದೆಡೆ ವಿಧಾನಸಭೆ ಪ್ರತಿಪಕ್ಷ ನಾಯಕನ ಸ್ಥಾನ ತೊರೆಯಲು ಮಲ್ಲಿಕಾರ್ಜುನ ಖರ್ಗೆ ಮೀನ ಮೇಷ ಎಣಿಸುತ್ತಿರುವುದು ಕಾಂಗ್ರೆಸ್ ಹೈಕಮಾಂಡ್ ಗೊಂದಲದಲ್ಲಿ ಸಿಲುಕುವ ಮೂಲಕ ಪಕ್ಷದಲ್ಲಿನ ಅಸಮಾಧಾನ ಸ್ಫೋಟಿಸಲು ಮತ್ತೊಂದು ವೇದಿಕೆ ಸಜ್ಜಾದಂತಾಗಿದೆ.
ಎಐಸಿಸಿ ಸಿದ್ಧಪಡಿಸಿದ್ಧ ರಾಜಿಸೂತ್ರದ ಭಾಗವಾಗಿ ಖರ್ಗೆ ಅವರು ಪಕ್ಷದ ಕೇಂದ್ರ ಕಾರ್ಯಕಾರಿಣಿ ಸದಸ್ಯರಾಗಿ ನಿಯುಕ್ತರಾಗಿದ್ದಾರೆ. ಆದರೆ ಅತೃಪ್ತ ನಾಯಕ ಸಿದ್ದರಾಮಯ್ಯನವರಿಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಸ್ಥಾನ ಅಲಂಕರಿಸುವ ಭಾಗ್ಯ ಇನ್ನೂ ಲಭಿಸಿಲ್ಲ. ಆ ಹುದ್ದೆ ತೊರೆಯಲು ಖರ್ಗೆ ಸುತಾರಾಂ ಒಪ್ಪುತ್ತಿಲ್ಲ.
ಖರ್ಗೆ ಜೊತೆಗೂ ಚರ್ಚೆ ನಡೆಸಿದ ಬಳಿಕವೇ ವರಿಷ್ಠರು ರಾಜಿ ಸೂತ್ರ ಪ್ರಕಟಿಸಿದ್ದು. ರಾಷ್ಟ್ರ ರಾಜಕಾರಣ ಇಷ್ಟವಿಲ್ಲ ಎಂದು ಖರ್ಗೆ ಸ್ಪಷ್ಟವಾಗಿ ಹೇಳಿದ್ದರೂ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿರಲಿಲ್ಲ. ಖರ್ಗೆ ಪಕ್ಷದ ಶಿಸ್ತಿಗೆ ಅನುಗುಣವಾಗಿ ನಡೆದುಕೊಳ್ಳುತ್ತಾರೆ ಎಮಬ ವಿಶ್ವಾಸ ಅದರದ್ದು. ಅದಕ್ಕಿಂತ ಹೆಚ್ಚಾಗಿ ಪಕ್ಷಕ್ಕಾಗಿ ನಾಲ್ಕು ದಶಕ ದುಡಿದ ಒಬ್ಬ ನಾಯಕನನ್ನು ವಲಸಿಗ ಸಿದ್ದುಗಾಗಿ ಸೀಟು ಬಿಡಿ ಎಂದು ಹೇಗೆ ಕೇಳಬೇಕೆಂಬ ಪೇಚಿಗೆ ಕೂಡಾ ಹೈಕಮಾಂಡ್ ಸಿಲುಕಿದೆ. ಖರ್ಗೆ ಬದಲಿಸಿದರೆ ಹಿಂದುಳಿದ ವರ್ಗಗಳ ಮತಗಳು ಪಕ್ಷದಿಂದ ದೂರ ಹೋಗಬಹುದೆಂಬ ಚಿಂತೆ ಕೂಡಾ ಹೈಕಮಾಂಡ್ ಅನ್ನು ಕಾಡುತೊಡಗಿದೆ.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಹುದ್ದೆಗಳು ಜನತಾ ಪರಿವಾರದಿಂದ ಬಂದವರ ಪಾಲಾಗಿದೆ. ಈಗ ವಿಧಾನಸಭೆ ಪ್ರತಿಪಕ್ಷ ನಾಯಕನಾಗಿಯೂ ಅಲ್ಲಿಂದ ಬಂದವರನ್ನೇ ನೇಮಕ ಮಾಡುವುದು ಸಮಂಜಸವಲ್ಲ ಎಂದೂ ಕೆಲವರು ವಾದಿಸುತ್ತಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಖರ್ಗೆ ಅವರನ್ನು ಗುಲ್ಬರ್ಗದಿಂದ ಕಣಕ್ಕಿಳಿಸುವ ಇಚ್ಛೆ ವರಿಷ್ಠರಿಗಿದೆ. ಅದನ್ನು ಖರ್ಗೆ ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡಿದ್ದಾರೆ. ಅಂತೂ ಈಗ ಹೈಕಮಾಂಡ್ ಇಬ್ಬರ ನಾಯಕರ ಸಮಸ್ಯೆ ಇತ್ಯರ್ಥದ ಮಧ್ಯೆ ಇಕ್ಕಟ್ಟಿನಲ್ಲಿ ಸಿಲುಕಿದೆ. |