ಮದರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಕನ್ನಡ, ತಮಿಳು, ತೆಲುಗು ಮತ್ತು ಸಂಸ್ಕೃತಗಳನ್ನೊಳಗೊಂಡ 'ಶಾಸ್ತ್ರೀಯ ಭಾಷೆಗಳ ವೈಶಿಷ್ಟ್ಯ' ಎಂಬ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಫೆ.26, 27ರಂದು ಮದರಾಸು ವಿವಿಯಲ್ಲಿ ಆವರಣದಲ್ಲಿ ಆಯೋಜಿಸಿದೆ.
ಫೆ.26ರಂದು ಬೆಳಗ್ಗೆ 10 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಮದರಾಸು ವಿವಿ ಉಪಕುಲಪತಿ ಡಾ.ಎಸ್.ರಾಮಚಂದ್ರನ್ ಅಧ್ಯಕ್ಷತೆ ವಹಿಸಲಿದ್ದು, ಬೆಂಗಳೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಹಂ.ಪ. ನಾಗರಾಜಯ್ಯ ಶಿಖರೋಪನ್ಯಾಸ ನೀಡಲಿದ್ದಾರೆ ಮತ್ತು ಚೆನ್ನೈನ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳ್ ಪ್ರಭಾರ ಅಧಿಕಾರಿ ಪ್ರೊ.ಕೆ.ರಾಮಸ್ವಾಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ವಿವಿಯ ಚೇಪಾಕ್ ಆವರಣದ ಎಫ್ 50 ಸಭಾಂಗಣದಲ್ಲಿ ನಡೆಯುವ ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ನಾಲ್ಕು ಗೋಷ್ಠಿಗಳು ನಡೆಯಲಿವೆ.
ಕರ್ನಾಟಕ ವಿವಿ ನಿವೃತ್ತ ಪ್ರಾಧ್ಯಾಪಕ ಡಾ. ಸಂಗಮೇಶ ಸವದತ್ತಿಮಠ ಅಧ್ಯಕ್ಷತೆಯಲ್ಲಿ ಫೆ.26ರಂದು ಪೂರ್ವಾಹ್ನ ನಡೆಯುವ ಮೊದಲ ಗೋಷ್ಠಿಯಲ್ಲಿ ಬೆಂಗಳೂರು ವಿವಿ ಪ್ರಾಧ್ಯಾಪಕ ಡಾ.ಬಸವರಾಜ ಸಿ.ಕಲ್ಹುಡಿ (ಶಾಸ್ತ್ರೀಯ ಭಾಷೆಯ ಪರಿಕಲ್ಪನೆ), ಮೈಸೂರಿನ ಸಿಐಐಎಲ್‌ನ ಡಾ.ಲಿಂಗದೇವರು ಹಳೆಮನೆ (ಶಾಸ್ತ್ರೀಯ ಭಾಷೆಯ ಮುಂದಿರುವ ಸವಾಲುಗಳು), ಹಂಪಿಯ ಕರ್ನಾಟಕ ವಿವಿ ಪ್ರವಾಚಕರಾದ ಡಾ.ಅಶೋಕ್ ಕುಮಾರ್ ರಂಜೇರೆ (ಕನ್ನಡ ಭಾಷೆಯ ವೈಶಿಷ್ಟ್ಯ) ಹಾಗೂ ಅಧ್ಯಕ್ಷ ಡಾ.ಸಂಗಮೇಶ ಅವರು ಕನ್ನಡ ವ್ಯಾಕರಣಗಳ ವೈಶಿಷ್ಟ್ಯ ಕುರಿತು ಉಪನ್ಯಾಸಗಳನ್ನು ನೀಡಲಿದ್ದಾರೆ.
ಮಧ್ಯಾಹ್ನ ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ ಡಾ.ಆರ್ವಿಯೆಸ್ ಸುಂದರಂ ಅಧ್ಯಕ್ಷತೆಯಲ್ಲಿ ನಡೆಯುವ ಎರಡನೇ ಗೋಷ್ಠಿಯಲ್ಲಿ ಅನಂತಪುರ ಕೃಷ್ಣದೇವರಾಯ ವಿವಿಯ ಪ್ರಾಧ್ಯಾಪಕ ಡಾ.ಆರ್.ಶೇಷಶಾಸ್ತ್ರಿ (ಕನ್ನಡ ಸಾಹಿತ್ಯದ ವೈಲಕ್ಷಣ್ಯ), ಬೆಂಗಳೂರು ವಿವಿ ನಿವೃತ್ತ ಪ್ರಾಧ್ಯಾಪಕ ಡಾ.ಎಸ್.ಕಾರ್ಲೊಸ್ (ತಮಿಳು ಸಾಹಿತ್ಯದ ಪ್ರಾಚೀನತೆ-ವಿಶಿಷ್ಟತೆ), ಬೆಂಗಳೂರು ಸಂಸ್ಕೃತ ವಿವಿ ಅಧ್ಯಕ್ಷ ಡಾ.ಮಲ್ಲೇಪುರಂ ಜಿ.ವೆಂಕಟೇಶ್ (ಶಾಸ್ತ್ರೀಯ ಭಾಷೆಯಾಗಿ ಸಂಸ್ಕೃತ) ಹಾಗೂ ಆರ್ವಿಸೆಯ್ ಸುಂದರಂ (ತೆಲುಗು-ಕನ್ನಡ: ವಿಶಿಷ್ಟ ಭಾಷಾ ಸಾಹಿತ್ಯ) ಉಪನ್ಯಾಸಗಳನ್ನು ನೀಡಲಿದ್ದಾರೆ.
ಫೆ.27ರಂದು ಡಾ.ಆರ್.ಶೇಷಶಾಸ್ತ್ರಿ ಅಧ್ಯಕ್ಷತೆಯಲ್ಲೇ ನಡೆಯುವ ಮೂರನೇ ಗೋಷ್ಠಿಯಲ್ಲಿ ಮಂಗಳೂರು ವಿವಿ ಪ್ರಾಧ್ಯಾಪಕರಾದ ಡಾ.ಸಬೀಹ ಭೂಮಿಗೌಡ (ವಚನ ಸಾಹಿತ್ಯದ ಸಾಂಸ್ಕೃತಿಕ ವೈಶಿಷ್ಟ್ಯ), ಮಂಗಳೂರು ಥಿಯೋಸಫಿಕಲ್ ಸೊಸೈಟಿಯ ಡಾ.ಎ.ವಿ.ನಾವಡ (ದಾಸ ಸಾಹಿತ್ಯದ ಸಾಂಸ್ಕೃತಿಕ ವಿಶಿಷ್ಟತೆ), ಗುಲ್ಬರ್ಗಾ ವಿವಿ ಪ್ರಾಧ್ಯಾಪಕ (ಕನ್ನಡ ಮಹಾಭಾರತಗಳ ಹೊಸತನ) ಹಾಗೂ ಬೆಂಗಳೂರು ವಿವಿ ಪ್ರವಾಚಕ ಡಾ.ಬಿ.ಗಂಗಾಧರ (ಕನ್ನಡ ರಾಮಾಯಣಗಳ ಹೊಸತನ) ವಿಚಾರ ಮಂಡಿಸಲಿದ್ದಾರೆ.
ಮಧ್ಯಾಹ್ನ ನಡೆಯುವ ನಾಲ್ಕನೇ ಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸುವ ಕನ್ನಡ ವಿವಿ ನಿವೃತ್ತ ಪ್ರಾಧ್ಯಾಪಕ ಡಾ.ದೇವರ ಕೊಂಡಾರೆಡ್ಡಿ (ಪ್ರಾಚೀನ ಕನ್ನಡ ಶಾಸನಗಳು), ಕರ್ನಾಟಕ ವಿವಿ ಪ್ರಾಧ್ಯಾಪಕರಾದ ಡಾ.ಶಾಂತಾ ಇಮ್ರಾಪುರ (ಕವಿರಾಜಮಾರ್ಗ ಪೂರ್ವದ ಕನ್ನಡ ಸಾಹಿತ್ಯ) ಹಾಗೂ ಬೆಂಗಳೂರು ವಿವಿ ಅಧ್ಯಾಪಕ ಡಾ.ಚಿತ್ತಯ್ಯ ಪೂಜಾರ್ (ಶಾಸ್ತ್ರೀಯ ಭಾಷೆ: ಮುಂದಿನ ಯೋಜನೆಗಳು) ಉಪನ್ಯಾಸ ಮಂಡಿಸಲಿದ್ದಾರೆ.
ಬಳಿಕ, ಧಾರವಾಡದ ಕರ್ನಾಟಕ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಹೆಚ್.ಎಂ,ಮಹೇಶ್ವರಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಚೆನ್ನೈಯ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಪಿ.ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ವಿಚಾರ ಸಂಕಿರಣದ ನಿರ್ದೇಶಕಿ, ಮದರಾಸು ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ತಮಿಳ್ ಸೆಲ್ವಿ ತಿಳಿಸಿದ್ದಾರೆ. |