ಬಳ್ಳಾರಿ ನಿಯೋಜಿತ ಸ್ಥಳದಲ್ಲಿ ವಿಮಾನ ನಿಲ್ದಾಣ ಮಾಡಿಯೇ ಸಿದ್ಧ. ಯಾರೇ ಅಡ್ಡಿ ಮಾಡಿದರೂ ಸಹಿಸುವುದಿಲ್ಲ ಎಂದು ಬಿ.ಎಸ್.ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.
ಯೋಜನೆ ವಿರೋಧಿಸುತ್ತಿರುವ ದೇವೇಗೌಡರು ಹಾಸನದಲ್ಲಿ ರೈತರ ಜಮೀನು ಪಡೆದುಕೊಂಡಿರುವ ಉದ್ದೇಶವೇನು? ಅವರಂತೆ ನಾವು ತಪ್ಪು ಮಾಡುತ್ತಿಲ್ಲ. ಅವರ ದೃಷ್ಟಿ ಕೇವಲ ಬಳ್ಳಾರಿ ರಾಜಕಾರಣದ ಮೇಲಿದೆ. ಉದ್ದೇಶಿತ ವಿಮಾನ ನಿಲ್ದಾಣ ಆಗುವುದು ನಿಶ್ಚಿತ ಎಂದು ಸಿಎಂ ಸ್ಪಷ್ಟಪಡಿಸಿದರು.
ಸರಕಾರದ ಶೇ. 50 ರಷ್ಟು ಕೆಲಸವನ್ನು ಮಠಗಳು ನಿರ್ವಹಿಸುತ್ತಿವೆ. ನಮಗಿಂತಲೂ ಉತ್ತಮ ಶಿಕ್ಷಣ ನೀಡುತ್ತಿವೆ. ಹಾಗಾಗಿ ಸರಕಾರ ನೀಡುವ ಅನುದಾನ ಸಹಾಯವಲ್ಲ , ಕರ್ತವ್ಯ. ಅನುದಾನ ನೀಡಿಕೆಯಲ್ಲಿ ಯಾವುದೇ ಓಲೈಕೆ ಮಾತಿಲ್ಲ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡಲಿದ್ದೇವೆ ಎಂದು ಘೋಷಿಸಿದರು.
ಸರ್ಕಾರದ ಬಗ್ಗೆ ಆಕ್ಷೇಪ ಎತ್ತಿರುವ ಆದಿಚುಂಚನಗಿರಿ ಮಠಾಧೀಶ ಬಾಲಗಂಗಾಧರನಾಥ ಶ್ರೀಗಳೊಂದಿಗೆ 2-3 ದಿನದಲ್ಲಿ ಭೇಟಿಯಾಗಿ ಚರ್ಚೆ ನಡೆಸಲಾಗುವುದು. ಜಾತಿ ಪಟ್ಟಿಗೆ ಹಲವನ್ನು ಸೇರ್ಪಡೆ ಮಾಡುತ್ತಿರುವ ಸರಕಾರ, ಜಾತಿ ಪುನರ್ವಿಂಗಡಣೆ ಮಾಡುತ್ತಿಲ್ಲ. ಬದಲಾಗಿ ಆಗಿರುವ ಲೋಪದೋಷಗಳನ್ನು ಸರಿಪಡಿಸುತ್ತಿದೆ ಎಂದು ಅವರು ಹೇಳಿದರು.
ಕಲಾವಿರ ಜೊತೆ ಸಚಿವ ರಾಮಚಂದ್ರೇಗೌಡ ನಡೆದುಕೊಂಡ ರೀತಿ ಸರಿಯಲ್ಲ. ಈ ಬಗ್ಗೆ ಸಚಿವರೊಂದಿಗೆ ಸಮಾಲೋಚಿಸಿ ಮುಂದೆ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು. |