ಲೋಕೋಪಯೋಗಿ ಇಲಾಖೆ ಹಣ ಬಿಡುಗಡೆ ಮಾಡುವ ವಿಚಾರದಲ್ಲಿ ಸರಕಾರ ತಾರತಾಮ್ಯ ಎಸಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ಸದಸ್ಯರು ಧರಣಿ ನಡೆಸಿ, ಸಭಾತ್ಯಾಗ ಮಾಡಿದ ಘಟನೆ ಮಂಗಳವಾರ ವಿಧಾನಮಂಡಲ ಅಧಿವೇಶನದಲ್ಲಿ ನಡೆಯಿತು.
ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಎ.ಎಸ್.ಪಾಟೀಲ್ ಅವರು ಬಿಜೆಪಿ ಶಾಸಕರಿರುವ ಕ್ಷೇತ್ರಗಳಿಗೆ ಹೆಚ್ಚಿನ ಹಣ ಬಿಡುಗಡೆ ಮಾಡಿ ಕಾಂಗ್ರೆಸ್ ಸದಸ್ಯರಿರುವ ಕ್ಷೇತ್ರಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪ ಮಾಡಿದರು. ಇದು ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿಗೆ ಎಡೆ ಮಾಡಿಕೊಟ್ಟಿತು.
ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿದ್ದರೆ ಅದನ್ನು ಸರಿಪಡಿಸುವುದಾಗಿ ಸಚಿವ ಉದಾಸಿ ಅವರು ನೀಡಿದ ಉತ್ತರದಿಂದ ತೃಪ್ತರಾಗದ ಕಾಂಗ್ರೆಸ್ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಗಿಳಿದು ಧರಣಿ ನಡೆಸಿದರು. ಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಸೌಹಾರ್ದತೆಯಿಂದ ವರ್ತಿಸಿ ಎಂದು ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ.
ಏತನ್ಮಧ್ಯೆ ಮಾತನಾಡಿದ ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ, ತಾರತಮ್ಯ ಸರಿಪಡಿಸುವ ಮನಸ್ಸು ಸರಕಾರಕ್ಕಾಗಲಿ, ಸಚಿವರಿಗಾಗಲಿ ಇಲ್ಲ, ಸಭಾಧ್ಯಕ್ಷರು ಸರಕಾರದ ಕಿವಿ ಹಿಂಡಬೇಕು. ನಿರಂಕುಶ ಪ್ರಭುತ್ವ ಇದು ಎಂದು ಆರೋಪಿಸಿ ಸಭಾತ್ಯಾಗ ಮಾಡುವುದಾಗಿ ಘೋಷಿಸಿ ಸದನದಿಂದ ಹೊರ ನಡೆದರು. |