ಚಾಮರಾಜನಗರದ ಸಂಸದ ಜೆಡಿಎಸ್‌ನ ಶಿವಣ್ಣ ಅವರು ಇನ್ನೆರಡು ದಿನದಲ್ಲಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಮಂಗಳವಾರ ತಿಳಿಸಿದ್ದಾರೆ.
ಮಂಗಳವಾರ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಸ್ಥಾನಕ್ಕೂ ಹಾಗೂ ಜೆಡಿಎಸ್‌ಗೂ ರಾಜೀನಾಮೆ ನೀಡುವುದಾಗಿ ತಿಳಿಸಿದ ಅವರು, ಇನ್ನೆರಡು ದಿನದಲ್ಲಿ ತನ್ನ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ.
ಜೆಡಿಎಸ್‌ನಿಂದ ಸಂಸದನಾಗಿ ಆಯ್ಕೆಯಾಗಿದ್ದರೂ ಕೂಡ ಪಕ್ಷದ ವರಿಷ್ಠರಾದ ದೇವೇಗೌಡರಾಗಲಿ, ಕುಮಾರಸ್ವಾಮಿಯವರಾಗಲಿ ತನ್ನನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಕಡೆಗಣಿಸುತ್ತಿರುವುದರಿಂದ ಪಕ್ಷದಿಂದ ಹೊರಬರುತ್ತಿರುವುದಾಗಿ ಅವರು ಕಾರಣ ನೀಡಿದ್ದಾರೆ.
ಅಲ್ಲದೇ ಶೀಘ್ರವೇ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಳ್ಳುವುದಾಗಿ ಹೇಳಿದ ಶಿವಣ್ಣ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸುವುದಾಗಿ ತಿಳಿಸಿದರು. |