ರಾಜ್ಯದಲ್ಲಿರುವ ಬಿಜೆಪಿ ಸರಕಾರಕ್ಕೆ 9 ತಿಂಗಳಾಗಿ ಹೆರಿಗೆ ಆಗಿದ್ದರೂ ಈ ಸರಕಾರ ಗಂಡು ಅಲ್ಲ-ಹೆಣ್ಣು ಅಲ್ಲ ಎಂದು ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸರಕಾರವನ್ನು ಕಟುವಾಗಿ ಟೀಕಿಸಿದ್ದಾರೆ.
ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ ಅವರು 9 ತಿಂಗಳು ಕಾದು ನೋಡಿದ್ದೇವೆ. ಹೆರಿಗೆ ಆದ ಮೇಲೆ ಗಂಡು ಅಲ್ಲ, ಹೆಣ್ಣು ಅಲ್ಲದ ಹಿಜಡಾ ಎಂಬಂತಾಗಿದೆ ಎಂದು ಛೇಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ, ಅವರು ಗಂಡು ಅಲ್ಲ, ಹೆಣ್ಣು ಅಲ್ಲ ಅಂಥ ಹೇಳಲು ಎಲ್ಲಿ ನೋಡಿದರು, ಅವರು ಸುಳ್ಳು ಹೇಳುತ್ತಿದ್ದಾರೆ ಎಂದಾಗ ವಿಧಾನಮಂಡಲದ ಅಧಿವೇಶನದಲ್ಲಿ ನಗುವಿನ ಅಲೆ ಎದ್ದಿತ್ತು.
ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ ಖರ್ಗೆ, ಇದೇ ರೀತಿ ಆಡಳಿತ ನಡೆದರೆ ಲೋಕಸಭಾ ಚುನಾವಣೆ ಬಳಿಕ ತಾವೇ ಕುಸಿದು ಬೀಳುತ್ತೀರಿ. ಉಪ ಚುನಾವಣೆಯ ಫಲಿತಾಂಶದ ಭ್ರಮೆಯಲ್ಲಿ ಇರಬೇಡಿ. ಅತಿಯಾದ ಆತ್ಮವಿಶ್ವಾಸ ಬೇಡ, ಮುಂದಿನ ಚುನಾವಣೆಯಲ್ಲಿ ನಿಮಗೆ ಬುದ್ದಿಕಲಿಸಿ ಹೆಚ್ಚಿನ ಸೀಟು ಗೆಲ್ಲುತ್ತೇವೆ. ನಿಮ್ಮದು ಸತ್ಯಂ ಕಂಪ್ಯೂಟರ್ಸ್ ಕಂಪೆನಿ ಇದ್ದಂತೆ ಗಾಳಿಪಟ ಹಾರಿಸುತ್ತಿದ್ದೀರಿ. ನಮ್ಮದು ಟಾಟಾ ಕಂಪೆನಿ. ದೇಶಕ್ಕಾಗಿ ದುಡಿಯುವ ಕಂಪೆನಿಯಾಗಿದ್ದು ವೈಯಕ್ತಿಕ ಆಸ್ತಿಯೇ ಇಲ್ಲ. ನಿಮ್ಮದೇನಿದ್ದರೂ ವೈಯಕ್ತಿಕವಾಗಿ ಆಸ್ತಿ ಮಾಡಿಕೊಂಡು ಹೋಗುವಿರಿ. ನಿಮ್ಮ ದೀಪ ಬಹುಕಾಲ ಉರಿಯುವುದಿಲ್ಲ ಎಂದು ಕಿಡಿಕಾರಿದರು. |