ಶಾಸಕರ ಭವನದಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆಯಲ್ಲಿಯೇ ಲೋಕಾಯುಕ್ತ ಬಲೆಗೆ ಬಿದ್ದಿರುವ ಕೆಜಿಎಫ್ ಬಿಜೆಪಿ ಶಾಸಕ ವೈ.ಸಂಪಂಗಿಯನ್ನು ಕಲಾಪದಿಂದ ಅಮಾನತು ಮಾಡಬೇಕು ಎಂದು ವಿಪಕ್ಷಗಳ ಸದಸ್ಯರು ವಿಧಾನಸಭೆಯಲ್ಲಿ ಮಂಗಳವಾರ ಒತ್ತಾಯಿಸಿದ ಘಟನೆ ನಡೆಯಿತು.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಈ ವಿಷಯದಲ್ಲಿ ಗಂಭೀರ ಚರ್ಚೆ ನಡೆಯಬೇಕು. ಸಂಪಂಗಿ ಅವರನ್ನು ಕಲಾಪದಿಂದ ಹೊರಗಿಡಬೇಕು. ಇದೇ ವ್ಯವಸ್ಥೆಯಲ್ಲಿ ಆಡಳಿತ ನಡೆಸುವುದು ಎಂದರೇನರ್ಥ. ಸರಕಾರ ಯಾವ ಕ್ರಮ ತೆಗೆದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವಿಷಯವನ್ನು ಶೂನ್ಯ ವೇಳೆಯಲ್ಲಿ ಚರ್ಚಿಸಲಾಗದು ಎಂದು ಸಭಾಧ್ಯಕ್ಷ ಜಗದೀಶ್ ಶೆಟ್ಟರ್ ಹಾಗೂ ಕಾನೂನು ಸಚಿವ ಸುರೇಶ್ ಕುಮಾರ್ ಅಭಿಪ್ರಾಯಪಟ್ಟರು.
ಆದರೂ ಪಟ್ಟು ಬಿಡದ ಖರ್ಗೆ, ಶಾಸಕರು ತಪ್ಪು ಮಾಡಿದರೆ ಶಿಕ್ಷೆಯಿಲ್ಲ ಎನ್ನುವ ಸಂದೇಶ ಜನರಿಗೆ ಹೋಗಬಾರದು. ಸಂಶಯವನ್ನು ನಿವಾರಿಸಲು ಕ್ರಮ ತೆಗೆದುಕೊಳ್ಳಬೇಕು. ಅವರು ತಪ್ಪು ಮಾಡಲಿಲ್ಲ ಎನ್ನುವುದಾದರೆ ಬಿಜೆಪಿ ಅವರನ್ನು ಯಾವ ಕಾರಣಕ್ಕೆ ಅಮಾನತು ಮಾಡಿದೆ. ಪಕ್ಷ ಕಳಂಕವನ್ನು ತಪ್ಪಿಸಿಕೊಳ್ಳಲು, ಚುನಾವಣಾ ವೇಳೆ ಮುಜುಗರದಿಂದ ತಪ್ಪಿಸಿಕೊಳ್ಳಲು ಅಮಾನತು ಮಾಡಿದೆ. ಇದೇ ಕಾರಣದಿಂದ ಅವರನ್ನು ವಿಧಾನಸಭೆಯಿಂದಲೂ ಅಮಾನತು ಮಾಡಬೇಕು ಎಂದು ವಾದಿಸಿದರು.
ವಾದ ವಿವಾದಗಳ ನಡುವೆ ಮಧ್ಯಪ್ರವೇಶಿಸಿದ ಸ್ಪೀಕರ್ ಶೆಟ್ಟರ್ ನನಗೆ ಯಾರನ್ನೂ ರಕ್ಷಿಸುವ ಉದ್ದೇಶವಿಲ್ಲ, ಶಾಸಕರ ಗೌರವ ಉಳಿಯಬೇಕು. ಅಧಿವೇಶನ ಮುಗಿಯುವ ಮುನ್ನ ನಿರ್ಣಯವನ್ನು ಪ್ರಕಟಿಸುತ್ತೇನೆ ಎಂದರು. |