ಮಂಡ್ಯದ ಮೈಷುಗರ್ ಕಾರ್ಖಾನೆ ಪುನಶ್ಚೇತನಕ್ಕೆ ಸರಕಾರ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.
ಕಾರ್ಖಾನೆ ಪುನಶ್ಚೇತನಕ್ಕೆ ಈಗಾಗಲೇ ಬಜೆಟ್‌ನಲ್ಲಿ 50 ಕೋಟಿ ರೂ. ಘೋಷಿಸಲಾಗಿದೆ. ಅಗತ್ಯ ಉಂಟಾದರೆ 50 ಕೋಟಿ ರೂ. ಸಾಲ ಪಡೆಯಲು ಸರಕಾರ ನೆರವು ನೀಡಲಿದೆ. ಈ ಕಾರ್ಖಾನೆ ಮುಂದಿನ ಮೂರು ವರ್ಷಗಳ ನಂತರ ಪ್ರತಿವರ್ಷ ಕನಿಷ್ಠ 1 ಕೋಟಿ ರೂ. ಲಾಭ ಗಳಿಸುವಂತೆ ಮಾಡುವುದು ತಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ವಿದ್ಯುತ್ ಸ್ಥಾವರಕ್ಕೆ ಕಲ್ಲಿದ್ದಲು ಪೂರೈಸುವ ಯಂತ್ರಗಳ ಜೋಡಣೆ, ವಾಯುಮಾಲಿನ್ಯದ ಯಂತ್ರೋಪಕರಣಗಳ ಜೋಡಣೆ ಸೇರಿದಂತೆ ವಿವಿಧ ಕಾರ್ಯಗಳಿಗಾಗಿ ಒಟ್ಟು 179 ಕೋಟಿ ರೂ.ಗಳ ಯೋಜನೆ ಸಿದ್ಧಗೊಳಿಸಲಾಗಿದೆ ಎಂದರು.
ಹೈಟೆಕ್ ಬಸ್ ನಿಲ್ದಾಣ: ಹಾಸನದಲ್ಲಿ ನಿರ್ಮಿಸುತ್ತಿರುವ ಹೈಟೆಕ್ ಬಸ್ ನಿಲ್ದಾಣವನ್ನು 3 ತಿಂಗಳಿನಲ್ಲಿ ಉದ್ಘಾಟನೆ ಮಾಡಲಾಗುವುದು ಎಂದು ಸಾರಿಗೆ ಸಚಿವ ಆರ್.ಅಶೋಕ್ ಹೇಳಿದರು. ಈ ಬಸ್ ನಿಲ್ದಾಣಕ್ಕೆ ಅಂದಾಜು 26.33 ಕೋಟಿ ರೂ.ಖರ್ಚಾಗುತ್ತಿದ್ದು, ರಾಜ್ಯದಲ್ಲಿಯೇ ಅತಿದೊಡ್ಡ ಬಸ್ ನಿಲ್ದಾಣ ಇದಾಗಲಿದೆ ಎಂದು ತಿಳಿಸಿದರು. |