ಅರಣ್ಯ ಒತ್ತುವರಿ ಮಾಡಿಕೊಂಡಿರುವುದನ್ನು ಯಾವುದೇ ಕಾರಣಕ್ಕೂ ಸಕ್ರಮ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸ್ಪಷ್ಟಪಡಿಸಿದರು.
ಮಾನವೀಯತೆಯ ದೃಷ್ಟಿಯಿಂದ ಸರಕಾರ ಕೈಗೊಳ್ಳಬೇಕಾದ ಕ್ರಮಗಳನ್ನು ಸ್ವಲ್ಪ ನಿಧಾನ ಮಾಡುತ್ತಿದೆ ಎಂದು ಸಿಎಂ ತಿಳಿಸಿದರು. ನಿಜವಾದ ಕಡು ಬಡವರು ಭೂ ರಹಿತರು ಒತ್ತುವರಿ ಮಾಡಿಕೊಂಡಿದ್ದರೆ ಅವರಿಗೆ ಪರ್ಯಾಯವಾಗಿ ಕಂದಾಯ ಭೂಮಿಯನ್ನು ಬೇರೆ ಕಡೆ ನೀಡಲು ಕೇಂದ್ರ ಸರಕಾರದ ನಿಯಮಗಳ ಪ್ರಕಾರ ಸಾಧ್ಯವೇ ಇಲ್ಲ. ಆದರೆ ಒತ್ತುವರಿ ಮಾಡಿಕೊಂಡಿರುವವರು ಬಡವರಾದ ಕಾರಣ ಕೇಂದ್ರದ ಮೇಲೆ ಒತ್ತಡ ತಂದು ಪರ್ಯಾಯ ಭೂಮಿ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಗೌರಿಬಿದನೂರು ತಾಲೂಕಿನಲ್ಲಿ ಆಗಿರುವ ಅರಣ್ಯದಲ್ಲಿನ ಭೂ ಒತ್ತುವರಿ 1978ರ ನಂತರ ಆಗಿರುವ ಅತಿಕ್ರಮಗಳಾಗಿವೆ. ಒಟ್ಟು 104 ರೈತರು 212.30 ಎಕರೆ ಒತ್ತುವರಿ ಮಾಡಿಕೊಂಡಿದ್ದಾರೆ. ಈ ಯಾವುದೇ ಪ್ರಕರಣಗಳು ಸಕ್ರಮ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.ಅತಿಕ್ರಮಣಕಾರರನ್ನು ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು. |