ಗಡಿಭಾಗದಲ್ಲಿ ಜನರಲ್ಲಿ ದ್ವೇಷ ಭಾವ ಮೂಡುವಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ಮಹಾರಾಷ್ಟ್ರ ಉದ್ರೇಕಕಾರಿ ಹೇಳಿಕೆಗಳನ್ನು ನೀಡುವುದನ್ನು ಮತ್ತೆ ಮುಂದುವರಿಸಿದ್ದು, ಗಡಿಭಾಗದ ಮರಾಠಿಗರಿಗೆ ಅನ್ಯಾಯವಾದಲ್ಲಿ ರಕ್ತ ಹರಿಸಲು ಸಿದ್ದ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಛಗನ್ ಭುಜಬಲ್ ಕಿಡಿಕಾರಿದ್ದಾರೆ. ಕೊಲ್ಲಾಪುರದಲ್ಲಿ ಮಂಗಳವಾರ ಎಂಇಎಸ್ ಆಶ್ರಯದ ಸಂಘಟನೆಗಳು ಏರ್ಪಡಿಸಿದ್ದ ಭವ್ಯ ಸೀಮಾ ಪರಿಷದ್‌ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬೆಳಗಾವಿ ಗಡಿವಾದ ಕುರಿತಂತೆ ಮಹಾಜನ್ ಆಯೋಗ ಮರಾಠಿಗರಿಗೆ ಅನ್ಯಾಯ ಮಾಡಿದೆ. ಗಡಿ ತಂಟೆಯ ಸಮಸ್ಯೆ ಬಿಡಿಸಲು ಚಳವಳಿ ಇನ್ನಷ್ಟು ತೀವ್ರಗೊಳಿಸಲಾಗುವುದು. 50 ವರ್ಷಗಳಿಂದ ಕರ್ನಾಟಕದಲ್ಲಿ ಮರಾಠಿಗಳ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಇನ್ನು ಮುಂದೆ ಅದನ್ನು ಸಹಿಸಲು ಸಾಧ್ಯವಿಲ್ಲ ಎಂದು ಗುಡುಗಿದರು.
ಗಡಿ ಸಮಸ್ಯೆ ಇತ್ಯರ್ಥವಾಗದೆ ನೆನೆಗುದಿಗೆ ಬಿದ್ದಿದೆ. ಈ ವಿಷಯದ ಬಗ್ಗೆ ಕೇಂದ್ರ ಸರ್ಕಾರ ಮರಾಠಿ ಭಾಷಿಕರ ಭಾವನೆಯನ್ನು ಅರ್ಥಮಾಡಿಕೊಳ್ಳಬೇಕು. ಮರಾಠಿಗರ ಹೋರಾಟ ನಿಲ್ಲದು ಎಂದಿಗೂ ನಿಲ್ಲುವುದಿಲ್ಲ ಎಂದು ಎಚ್ಚರಿಕೆಯನ್ನೂ ನೀಡಿದರು. |