ನಾನು ಯಾವುದೇ ಸಮುದಾಯವನ್ನು ಕಡೆಗಣಿಸಿಲ್ಲ, ಒಂದು ವೇಳೆ ತಪ್ಪು ಮಾಡಿದ್ದರೆ ಸ್ವಾಮೀಜಿಗಳು ಕಿವಿ ಹಿಂಡಿ ಬುದ್ದಿ ಹೇಳಬಹುದು' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಒಕ್ಕಲಿಗ ಸಮಾಜಕ್ಕೆ ಅನ್ಯಾಯವಾಗಿದೆ ಎಂಬ ಹಿನ್ನೆಲೆಯಲ್ಲಿ ಇಂದು ಆದಿಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮೀಜಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ನಂತರ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಒಕ್ಕಲಿಗ ಸಮಾಜಕ್ಕೆ ಅನ್ಯಾಯವಾಗಿದೆ ಅಂತ ನಾನು ಹೇಳಿಲ್ಲ ಅದು ಮಾಧ್ಯಮಗಳಲ್ಲಿ ತಪ್ಪಾಗಿ ಪ್ರಕಟಗೊಂಡಿದೆ ಎಂದು ಈ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದ ಸ್ವಾಮೀಜಿ, ಯಡಿಯೂರಪ್ಪ ಅವರ ಸರಕಾರ ಉತ್ತಮ ಕಾರ್ಯ ಮಾಡುತ್ತಿದ್ದು, ಅವರ ಸರಕಾರ ಇನ್ನೂ ಹತ್ತಾರು ವರ್ಷಗಳ ಕಾಲ ಆಡಳಿತ ನಡೆಸಲಿ ಎಂದು ಶುಭ ಹಾರೈಸಿದರು.
ಒಕ್ಕಲಿಗ ಸಮಾಜ ಸೇರಿದಂತೆ ಯಾರಿಗೂ ಸರಕಾರ ಯಾವುದೇ ಕಾರಣಕ್ಕೂ ಅನ್ಯಾಯ ಮಾಡಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೊನ್ನೆ ಹೊನ್ನಾಳಿಯ ಸೊರಗೊಂಡನಕೊಪ್ಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದರು.
ಆದಿ ಚುಂಚನಗಿರಿ ಮಠಾಧೀಶ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು, ಒಕ್ಕಲಿಗರನ್ನು ಸರಕಾರ ಅಸ್ಪ್ರಶ್ಯರಂತೆ ನೋಡುತ್ತಿದೆ ಎಂದು ಹೇಳಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಎಲ್ಲಾ ಸಮಾಜ ವರ್ಗದವರಿಗೂ ಸಮಾನವಾಗಿ ಪ್ರಾತಿನಿಧ್ಯ ನೀಡಲಾಗಿದ್ದು, ಯಾವುದೇ ಸಮಾಜಕ್ಕೂ ತಾರತಮ್ಯ ಮಾಡಿಲ್ಲ ಎಂದಿದ್ದರು.
ಒಂದು ವೇಳೆ ಸ್ವಾಮೀಜಿಗೆ ನಮ್ಮ ಸರಕಾರದ ಮೇಲೆ ಅಸಮಾಧಾನ ಇದ್ದರೆ, ತಕ್ಷಣ ಒಂದೆರಡು ದಿನಗಳಲ್ಲಿ ಸ್ವಾಮೀಜಿಗಳನ್ನು ಭೇಟಿ ಮಾಡಿ ಈ ವಿಷಯದ ಬಗ್ಗೆ ಚರ್ಚಿಸುವುದಾಗಿಯೂ ಹೇಳಿದ್ದರು. |