ಬಿಜೆಪಿಯಲ್ಲಿ ಉಂಟಾಗಿರುವ ಗುಂಪುಗಾರಿಕೆಯಿಂದಾಗಿ ಮುಂಬರುವ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕಸರತ್ತು ತಲೆನೋವಾಗಿ ಪರಿಣಮಿಸಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಂಸದ ಅನಂತ್ ಕುಮಾರ್ ಅಭ್ಯರ್ಥಿಗಳ ಆಯ್ಕೆಯಲ್ಲಿ ವಿಭಿನ್ನ ನಿಲುವು ತಾಳಿರುವುದು ಪಕ್ಷದಲ್ಲಿ ಮುಜುಗರ ಪರಿಸ್ಥಿತಿ ನಿರ್ಮಾಣವಾಗುವಂತಾಗಿದೆ.
ಮುಂಬರುವ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಈಗಾಗಲೇ ಚರ್ಚೆ ಸಮಾಲೋಚನೆಗಳು ನಡೆದಿದ್ದರೂ ಯಾವುದು ಮುಕ್ತವಾಗಿಲ್ಲ. ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅನಧಿಕೃತವಾಗಿ ಪ್ರಕಟಿಸುವ ಮೂಲಕ ಅನಂತ್ ಕುಮಾರ್ ಅವರ ಬಣವನ್ನು ಬಾಯಿ ಮುಚ್ಚಿಸುವ ಯತ್ನ ಕೂಡ ನಡೆದಿದೆ.
ಏತನ್ಮಧ್ಯೆ ಲೋಕಸಭೆಗೆ ಸ್ಪರ್ಧಿಸಲಿರುವ ಹೆಸರನ್ನು ಪಕ್ಷದ ವರಿಷ್ಠರು ಪ್ರಕಟಿಸುವ ಮುನ್ನವೇ 8-10 ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಅಭ್ಯರ್ಥಿಗಳ ಹೆಸರನ್ನು ಬಹಿರಂಗಗೊಳಿಸಲಾಗಿದೆ.
ಹಾವೇರಿಯಿಂದ ಲೋಕೋಪಯೋಗಿ ಸಚಿವ ಉದಾಸಿ ಪುತ್ರ ಶಿವಕುಮಾರ್, ಚಿಕ್ಕೋಡಿಯಿಂದ ಸಚಿವ ಉಮೇಶ್ ಕತ್ತಿ ಅವರ ಸಹೋದರ ರಮೇಶ್ ಕತ್ತಿ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ.
ಗುಲ್ಬರ್ಗದಿಂದ ಪಶುಸಂಗೋಪನಾ ಸಚಿವ ರೇವುನಾಯ್ಕ ಬೆಳಮಗಿ, ಬೀದರ್‌ನಿಂದ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಗುರುಪಾದಪ್ಪ ನಾಗಮಾರಪಲ್ಲಿ, ಬೆಂಗಳೂರು ಕೇಂದ್ರದಿಂದ ಮಾಜಿ ಲೋಕಾಯುಕ್ತ ವಂಕಟಾಚಲ, ಬೆಂಗಳೂರು ಗ್ರಾಮಾಂತರದಿಂದ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ನಾರಾಯಣ ಗೌಡ, ಚಿತ್ರದುರ್ಗದಿಂದ ಜನಾರ್ದನ ಸ್ವಾಮಿ, ಮಂಗಳೂರು-ನಳಿನ್ ಕುಮಾರ್ ಕಟೀಲು, ಕೊಪ್ಪಳ-ಬಸವರಾಜ ಪಾಟೀಲ್, ಮಂಡ್ಯ-ಡಿ.ಸಿ.ತಮ್ಮಣ್ಣ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. |