ಮುಜರಾಯಿ ಇಲಾಖೆ ಶಿವರಾತ್ರಿ ಹಬ್ಬದಂದು ಗಂಗಾಜಲ ತೀರ್ಥವನ್ನು ದೇವಾಲಯಗಳಲ್ಲಿ ನೀಡಿದ ವಿಷಯ ಬುಧವಾರ ವಿಧಾನಪರಿಷತ್‌ನಲ್ಲಿ ಪ್ರಸ್ತಾಪಗೊಳ್ಳುವ ಮೂಲಕ ಸ್ವಾರಸ್ಯಕರ ಚರ್ಚೆಗೆ ಎಡೆಮಾಡಿಕೊಟ್ಟ ಪ್ರಸಂಗ ನಡೆಯಿತು.
ಹಾಸನ ಜಿಲ್ಲೆಯಲ್ಲಿ ಶುದ್ದ ಕುಡಿಯುವ ನೀರು ಪೂರೈಸುವ ಸಂಬಂಧ ಸಣ್ಣ ನೀರಾವರಿ ಸಚಿವ ಗೋವಿಂದ ಕಾರಜೋಳ ಅವರು ಉತ್ತರ ನೀಡುತ್ತಿದ್ದ ಸಂದರ್ಭದಲ್ಲಿ ಜೆಡಿಎಸ್‌ನ ವೈ.ಎಸ್.ವಿ.ದತ್ತ ಮಧ್ಯೆ ಪ್ರವೇಶಿಸಿ ಬೆಂಗಳೂರಿಗೆ ಗಂಗಾಜಲ ತಂದ ಸಚಿವ ಕೃಷ್ಣಯ್ಯ ಶೆಟ್ಟಿ ಅವರಿಗೆ ಕುಡಿಯುವ ನೀರು ಪೂರೈಸುವ ಕೆಲಸ ವಹಿಸಿಕೊಡಿ ಎಂದು ಸರಕಾರವನ್ನು ಛೇಡಿಸಿದರು.
ಸಭಾನಾಯಕ ವಿ.ಎಸ್.ಆಚಾರ್ಯ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಗಂಗಾಜಲದ ಬಗ್ಗೆ ಹಗುರವಾಗಿ ಮಾತನಾಡಬೇಡಿ ಜಲದ ಕುರಿತು ಜನರಲ್ಲಿ ಪವಿತ್ರ ಭಾವನಯಿದೆ. ನಿನ್ನೆ ಈ ಬಗ್ಗೆ ಉತ್ತರ ನೀಡಲಾಗಿದೆ ಮತ್ತೆ ಮತ್ತೆ ಅದನ್ನೇ ಪ್ರಸ್ತಾಪಿಸಬೇಡಿ ಎಂದು ಸದಸ್ಯರಿಗೆ ಕಿವಿಮಾತು ಹೇಳಿದರು.
ಈ ಮಧ್ಯೆ ಸದಸ್ಯರೊಬ್ಬರು ಗಂಗಾಜಲ ಸಾಯುವವರನ್ನು ಬದುಕುಳಿಸುತ್ತದೆ ಎಂಬುದನ್ನು ಮರೆಯಬೇಡಿ ಎಂದಾಗ ಇದಕ್ಕೆ ಪ್ರತಿಕ್ರಿಯಿಸಿದ ಜೆಡಿಯುನ ನಾಯಕ ಎಂ.ಪಿ.ನಾಡಗೌಡ, ಸರಕಾರಕ್ಕೂ ಗಂಗಾಜಲ ಬೇಕಾಗಿದೆ ಕೊನೆಗಾಲದಲ್ಲಿ ಜೀವ ಉಳಿಸಿಕೊಳ್ಳಲು ಗಂಗಾಜಲದ ಮೊರೆ ಹೋಗಬೇಕಿದೆ ಎಂದು ಸರಕಾರವನ್ನು ಚುಚ್ಚಿದರು. |