ಈ ಸುದ್ದಿ ಓದಿದ್ರೆ, 'ನಾಯಿ ಬೆಕ್ಕುಗಳ ಕೈಯಲ್ಲೂ ಮೊಬೈಲ್' ಎಂಬ ಉಡಾಫೆ ಮಾತಿಗೆ ಬೆಲೆ ಬಂದಂತಾಗುತ್ತದೆಯೇನೋ ಅನ್ನಿಸಬಹುದು. ಹೊಟ್ಟೆಯೊಳಗೆ ಮೊಬೈಲ್ ರಿಂಗ್ ಆಗುತ್ತಿದ್ದರೆ ಆ ಕೋಣಕ್ಕೆ ಏನಾಗಬೇಡ! ಅಷ್ಟೊಳ್ಳೆ ರಿಂಗಿಂಗ್ ಟೋನ್ ಇದ್ದ ಕಾರಣ ಎಂಜಾಯ್ ಮಾಡಿರಬಹುದೇ?
ಹೌದು ಇದು ನಡೆದದ್ದು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಹೊಸರಳ್ಳಿ ಎಂಬಲ್ಲಿ! ಈಶ್ವ ತೋಟಗಾರ್ ಎಂಬ ರೈತರೊಬ್ಬರು ಸೋಮವಾರ ತಮ್ಮ ಹಟ್ಟಿಯಲ್ಲಿ ಕೆಲಸ ಮಾಡುತ್ತಿದ್ದಾಗ ಮೊಬೈಲ್ ಕಳೆದುಕೊಂಡಿದ್ದರು. ಅದನ್ನು ಪ್ಲಾಸ್ಟಿಕ್ ತೊಟ್ಟೆಯಲ್ಲಿ ಸುತ್ತಿಟ್ಟು ಅವರು ಅಂಗಿಯ ಜೇಬಿನಲ್ಲಿಟ್ಟುಕೊಂಡಿದ್ದರು. ಹಟ್ಟಿ ಶುಚಿಗೊಳಿಸುತ್ತಿದ್ದಾಗ ಬಹುಶಃ ಇದು ಎಲ್ಲೋ ಬಿದ್ದು ಹೋಗಿರಬೇಕೆಂದು ಅವರು ನಿರಾಶೆಯ ನಡುವೆಯೂ ನಂಬಿ ಸುಮ್ಮನಾಗಿದ್ದರು.
ಆದರೆ, ಅದು ಈ ಕೋಣವು ಸೆಗಣಿ ಹಾಕಿದಾಗ ಅದರ ಒಳಗೆ ಪ್ಲಾಸ್ಟಿಕ್ ಲಕೋಟೆಯಲ್ಲಿ ಭದ್ರವಾಗಿದ್ದ ಮೊಬೈಲ್ ಕಂಡು ಅಚ್ಚರಿಯೂ, ಆಘಾತವೂ ಆಗಿತ್ತು ಅವರಿಗೆ. ಸೆಗಣಿ ಬಿದ್ದದ್ದು ಮೆದುವಾದ ಮೇಲ್ಮೈ ಒಂದರ ಮೇಲೆ. ಹಾಗಾಗಿ ಮತ್ತು ಅದು ಪ್ಲಾಸ್ಟಿಕ್ ಲಕೋಟೆಯೊಳಗೆ ಸುತ್ತಿದ್ದರಿಂದಾಗಿ ಮೊಬೈಲಿಗೆ ಯಾವುದೇ ಹಾನಿಯಾಗಿಲ್ಲ. ಅದನ್ನು ತೆಗೆದು ನೋಡಿದಾಗ, ಒಬ್ಬರಿಬ್ಬರು ಕರೆ ಮಾಡಿದ್ದಲ್ಲ, ಒಟ್ಟು ಏಳು ಮಿಸ್ಡ್ ಕಾಲ್‌ಗಳು ಇದ್ದವು ಅದರಲ್ಲಿ! ಅಂದರೆ, 'ನೀವು ಹೋದಲ್ಲೆಲ್ಲಾ ಹಿಂಬಾಲಿಸುತ್ತದೆ' (ವೇರೆವರ್ ಯು ಗೋ, ವಿ ವಿಲ್ ಫಾಲೋ) ಎಂದು ಹೇಳಿಕೊಳ್ಳುವ ಮೊಬೈಲ್ ನೆಟ್‌ವರ್ಕ್ ಕಂಪನಿಗಂತೂ ಇದನ್ನು ಮತ್ತಷ್ಟು ಒತ್ತಿ ಒತ್ತಿ ಹೇಳಲು ಯಾವುದೇ ಅಡ್ಡಿಯಿಲ್ಲ!
ಹಟ್ಟಿಯಲ್ಲಿ ಪಶು ಆಹಾರದ ನಡುವೆ ಅಥವಾ ಬೈಹುಲ್ಲಿನ ಮಧ್ಯೆ ಈ ಮೊಬೈಲ್ ಬಿದ್ದು ಹೋಗಿರಬಹುದು ಮತ್ತು ಈ ಕೋಣವು ಅದನ್ನು ಹಾಗೇ ನುಂಗಿರಬಹುದು ಎಂಬ ಸಂದೇಹವಿದೆ.
ಆದರೆ ಕರೆ ಮಾಡಿದವರಿಗೆ ಕಾಲರ್ ಟ್ಯೂನ್ ಯಾವ ರೀತಿ ಕೇಳಿಸಿಕೊಂಡಿರಬಹುದು? ಏನಾದರೂ ಬದಲಾದ ಧ್ವನಿ ಕೇಳಿಸಿಕೊಂಡಿರಬಹುದೇ? ಅದು ಪತ್ತೆ ಹಚ್ಚಬೇಕಾದ ಸಂಗತಿಯೇ. ಅದೆಲ್ಲಾ ಬಿಡಿ, ತನ್ನ ಹೊಟ್ಟೆಯೊಳಗೇ ಮೊಬೈಲ್ ಒಂದಲ್ಲ, ಎರಡಲ್ಲ, ಏಳು ಬಾರಿ ರಿಂಗ್ ಆಗುತ್ತಿರುವಾಗ ಆ ಕೋಣಕ್ಕೆ ಹೇಗಾಗಿರಬೇಡ? ಅದು ಯಾವ ರೀತಿ ಚಡಪಡಿಸುತ್ತಿದ್ದಿರಬಹುದು? ಬಹುಶಃ, ಹೊಟ್ಟೆಯೊಳಗಿನಿಂದ ಈ ರೀತಿಯ 'ಸಂಗೀತ ಧ್ವನಿ' ಹೇಗೆ ಬರುತ್ತಿದೆ ಎಂದು ಅದಕ್ಕೇ ಅಚ್ಚರಿಯಾಗಿರಬೇಕು! ಯಾಕೆಂದರೆ, ತೋಟಗಾರ್ ಅವರು ಹಳೆಯ ಕನ್ನಡ ಚಿತ್ರಗೀತೆಯೊಂದನ್ನು ರಿಂಗ್ ಟೋನ್ ಆಗಿ ಸೆಟ್ ಮಾಡಿಕೊಂಡಿದ್ದರು. ಕೋಣವೂ ಅದನ್ನು ಎಂಜಾಯ್ ಮಾಡುತ್ತಿದ್ದಿರಬಹುದು!
|