ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಸಕ್ತ ಸಾಲಿನಲ್ಲಿ ಮಂಡಿಸಿದ್ದ ರಾಜ್ಯ ಬಜೆಟ್ ಬಿಜೆಪಿ ಪ್ರಚಾರದ ಕೈಪಿಡಿಯಂತಿದೆ ಎಂದು ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಬುಧವಾರ ವಿಧಾನಸಭೆಯಲ್ಲಿ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಬಜೆಟ್ ಮೇಲಿನ ಚರ್ಚೆ ನಡೆಸಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಬಾರಿಯಾದರು ಉತ್ತಮ ಬಜೆಟ್ ಮಂಡಿಸ್ತಾರೆ ಅನ್ನುವ ನಿರೀಕ್ಷೆ ಸುಳ್ಳಾಗಿದೆ. ಜಾತಿ-ಉಪಜಾತಿ, ಮಠಗಳಿಗೆ 130ಕೋಟಿ ರೂಪಾಯಿ ನೀಡುವ ಮೂಲಕ ಧಾರ್ಮಿಕ ದತ್ತಿ ಇಲಾಖೆಯ ಪಟ್ಟಿಯನ್ನು ತಯಾರಿಸಿದ್ದಾರೆ ಎಂದು ಛೇಡಿಸಿದರು.
ಪದೇ ಪದೇ ರೈತನ ಮಗನೆಂದು ಹೇಳಿಕೊಳ್ಳುತ್ತಿರುವ ಮುಖ್ಯಮಂತ್ರಿಗಳು ನೀರಾವರಿಗೆ ಅತಿ ಕಡಿಮೆ ಹಣ ಮೀಸಲಿಟ್ಟಿದ್ದಾರೆ ಎಂದು ದೂರಿದರು. ಹಿಂದೆ ಶೇ.25ರಷ್ಟು ಹಣವನ್ನು ನೀರಾವರಿಗೆ ನೀಡಲಾಗುತ್ತಿತ್ತು. ಇದೀಗ ಅದು ಶೇ.14ಕ್ಕೆ ಇಳಿದಿದೆ. ಹಾಗಾದರೆ ಇದು ರೈತ ಪರ ಬಜೆಟ್ ಹೇಗಾಗುತ್ತದೆ ಎಂದು ಪ್ರಶ್ನಿಸಿದರು.
ಬಿಜೆಪಿ ಹೊರತುಪಡಿಸಿ ಇತರ ಪಕ್ಷಗಳ ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ಹಣ ಕೂಡ ನೀಡಿಲ್ಲ, ಅದರಲ್ಲಿ ರಾಜಕೀಯ ದ್ವೇಷ ಅಡಗಿರುವುದು ಕಾಣುತ್ತದೆ. ಹಿಂದೆ ಎಂದೂ ಈ ರೀತಿ ಮುಖ್ಯಮಂತ್ರಿಗಳು ತಾರತಾಮ್ಯ ಮಾಡಿದ್ದ ಉದಾಹರಣೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. |