ನ್ಯಾಯದಾನ ವಿಳಂಬವಾಗುತ್ತಿರುವುದರಿಂದ ರೋಸಿಹೋದ ವಿಚಾರಣಾಧೀನ ಕೈದಿಯೊಬ್ಬ ನ್ಯಾಯಾಧೀರತ್ತ ಚಪ್ಪಲಿ ಎಸೆದ ಘಟನೆ ಬುಧವಾರ ಕಾರವಾರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದಿದೆ.
ಸಂತೋಷ ಪರಶುರಾಮ ಅಂಚಟಗೇರಿ ಎಂಬ ವಿಚಾರಣಾಧೀನ ಕೈದಿ ನ್ಯಾಯಾಧೀರತ್ತ ಚಪ್ಪಲಿ ಎಸೆದಾತ ಎಂದು ಗುರುತಿಸಲಾಗಿದೆ. ಕೊಲೆ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಕಳೆದ ಮೂರು ವರ್ಷಗಳಿಂದ ಈತ ವಿಚಾರಣೆ ಎದುರಿಸುತ್ತಿದ್ದಾನೆ.
2005ರ ಡಿಸೆಂಬರ್‌ನಲ್ಲಿ ಕಾರವಾರದ ಕೋಡಿಬಾಗ್‌ನಲ್ಲಿ ನಡೆದ ಕೇಶವ ಬಿಕ್ಕು ಮೇಸ್ತಾ ಅವರ ಕೊಲೆಗೆ ಸಂಬಂಧಿಸಿ ತನಿಖೆ ನಡೆಸಿದ ಪೊಲೀಸರು ಸಂತೋಷ ಅಂಚಟಗೇರಿಯನ್ನು ಬಂಧಿಸಿ ಎರಡನೇ ಆರೋಪಿ ಎಂದು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ಪ್ರಕರಣದ ವಿಚಾರಣೆ ಬುಧವಾರ ನಿಗದಿಯಾಗಿತ್ತು. ಆದರೆ ಆರೋಪಿ ಪರ ವಕೀಲರು ಬಾರದಿದ್ದುದರಿಂದ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು 1-6-2009ಕ್ಕೆ ಮುಂದೂಡಿದರು.
ವಿಚಾರಣೆಯನ್ನು ಪದೇ ಪದೇ ಮುಂದೂಡುತ್ತಿರುವುದರಿಂದ ಅಸಮಾಧಾನಗೊಂಡ ರೋಸಿಹೋದ ಆರೋಪಿ ನ್ಯಾಯಾಧೀಶರತ್ತ ಚಪ್ಪಲಿ ತೂರಿದ್ದು, ಅದು ಬೆಂಚ್ ಕ್ಲಾರ್ಕ್ ಸಮೀಪ ಬಿದ್ದಿತು ಎನ್ನಲಾಗಿದೆ.
ಚಪ್ಪಲಿ ಎಸೆದಿರುವುದನ್ನು ಆರೋಪಿ ಒಪ್ಪಿಕೊಂಡಿದ್ದರಿಂದ ಜಿಲ್ಲಾ ಸತ್ರ ಮತ್ತು ಸಿವಿಲ್ ನ್ಯಾಯಾಧೀಶ ಎಚ್.ಎಂ.ಭರತೇಶ ಅವರು ಆರೋಪಿಗೆ ರೂ.200 ದಂಡ ಹಾಗೂ ಇದಕ್ಕೆ ತಪ್ಪಿದಲ್ಲಿ ಒಂದು ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. |