ಅನ್ಯ ಕೋಮಿನ ಯುವಕನೊಂದಿಗೆ ಮಾತನಾಡುತ್ತಿದ್ದ ಜೋಡಿಯೊಂದನ್ನು 'ನೈತಿಕ ಪೊಲೀಸ್' ಗುಂಪೊಂದು ದಿಢೀರನೆ ಆಗಮಿಸಿ ಧಮಕಿ ಹಾಕಿದ ಘಟನೆ ನಗರದ ಬಲ್ಮಠದಲ್ಲಿ ನಡೆದಿದೆ.
ಇಲ್ಲಿನ ಜ್ಯೂಸ್ ಸೆಂಟರ್‌ವೊಂದರಲ್ಲಿ ಅನ್ಯಕೋಮಿನ ಯುವಕನೊಂದಿಗೆ ತಂಪು ಪಾನೀಯ ಸೇವಿಸುತ್ತಿದ್ದುದನ್ನು ಗಮನಿಸಿದ ತಂಡವೊಂದು ಆಗಮಿಸಿ ಇಬ್ಬರನ್ನು ತರಾಟೆಗೆ ತೆಗೆದುಕೊಂಡು ಬೆದರಿಕೆ ಹಾಕಿ ಹಲ್ಲೆ ನಡೆಸಿ ಪರಾರಿಯಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸ್ ತಂಡ ಇಬ್ಬರನ್ನೂ ಠಾಣೆಗೆ ಕರೆದೊಯ್ದು ಹೇಳಿಕೆ ಪಡೆದುಕೊಂಡಿದ್ದಾರೆ. ಆದರೆ ಯುವಕ ಹಾಗೂ ಯುವತಿಯ ಮನೆಯವರು ದೂರು ದಾಖಲಿಸಲು ನಿರಾಕರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಹಲ್ಲೆ ನಡೆಸಿದವರ ಕುರಿತು ತನಿಖೆ ನಡೆಸುತ್ತಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ದೀಲಿಪ್ ಕುಮಾರ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ನಗರದ ಎಮ್ಮೇಶಿಯ ಪಬ್ ಮೇಲೆ ಶ್ರೀರಾಮಸೇನೆಯ ಕಾರ್ಯಕರ್ತರು ದಾಳಿ ನಡೆಸಿದ ಘಟನೆ ರಾಷ್ಟ್ರಾದ್ಯಂತ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಬಳಿಕ ಕೇರಳದ ಶಾಸಕರೊಬ್ಬರ ಪುತ್ರಿಯ ಮೇಲೂ ಗುಂಪೊಂದು ಹಲ್ಲೆ ನಡೆಸಿತ್ತು. ಅದಾದ ನಂತರ ಮೂಡುಬಿದ್ರೆ ಸಮೀಪ ಶಾಲಾ ಬಾಲಕಿಯೊಬ್ಬಳು ಮುಸ್ಲಿಂ ಯುವಕನನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಕ್ಕೆ ನೈತಿಕ ಪೊಲೀಸ್ ಪಡೆ ಅವರಿಬ್ಬರನ್ನು ಪೊಲೀಸರಿಗೊಪ್ಪಿಸಿದ್ದರು. ಇದರಿಂದ ಅವಮಾನಿತಳಾದ ಹುಡುಗಿ ನೇಣಿಗೆ ಶರಣಾಗಿದ್ದಳು. ಇದೀಗ ಮತ್ತೊಂದು ದಾಳಿ ಪ್ರಕರಣ ನಡೆದಿದೆ.
|