ರಸ್ತೆ ಅಭಿವೃದ್ದಿಗಾಗಿ 1525 ಕೋಟಿ ರೂ. 147 ವಾರ್ಡ್‌ಗಳ ಕಾಮಗಾರಿಗೆ 882 ಕೋಟಿ ರೂ. ಕಲ್ಯಾಣ ಕಾರ್ಯಕ್ರಮಗಳಿಗೆ 533 ಕೋಟಿ ರೂ. ವೆಚ್ಚ ಮಾಡುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2009-10ನೇ ಸಾಲಿನ ಬಜೆಟ್ ಮಂಡನೆ ಮಂಡಿಸಲಾಯಿತು.
ಪಾಲಿಕೆ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಆಯುಕ್ತ ಡಾ. ಎಸ್. ಸುಬ್ರಮಣ್ಯ, ಪಾಲಿಕೆಯ ಪ್ರತಿ ವಾರ್ಡ್ ಅಭಿವೃದ್ದಿ ಕಾಮಗಾರಿಗಳಿಗೆ ತಲಾ 6 ಕೋಟಿ ರೂ. ಘನತಾಜ್ಯ ವಸ್ತುಗಳ ನಿರ್ವಹಣೆಗೆ 250 ಕೋಟಿ ರೂ. ಮಳೆ ನೀರಿನ ಚರಂಡಿ ಅಭಿವೃದ್ದಿಗೆ 200 ಕೋಟಿ ರೂ. ವೆಚ್ಚ ತಗುಲಲಿದೆ ಎಂದು ತಿಳಿಸಿದರು.
ನಗರದಲ್ಲಿ ಸಂಚಾರಿ ದಟ್ಟಣೆ ನಿವಾರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಪ್ರಮುಖ ರಸ್ತೆಗಳಲ್ಲಿ ತಡೆ ರಹಿತ ಸಂಚಾರ ವ್ಯವಸ್ಥೆ, ಪಾದಚಾರಿ ಸುರಂಗ ಮಾರ್ಗ ಸೇರಿದಂತೆ ಹತ್ತು ಹಲವು ನೂತನ ಯೋಜನೆಗಳಿಗೆ ಬಜೆಟ್‌ನಲ್ಲಿ ಒತ್ತು ನೀಡಲಾಯಿತು ಎಂದು ಹೇಳಿದರು.
ಸಾರ್ವಜನಿಕರ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಲು ಕಂಪ್ಯೂಟರೀಕೃತ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ 273 ಕೇಂದ್ರಗಳನ್ನು ಪ್ರಾರಂಭಿಸಲಾಗುವುದು ಎಂದು ಅವರು ತಿಳಿಸಿದರು. |